ಹುಬ್ಬಳ್ಳಿ: ಯಾವುದೇ ಸಮಯದಲ್ಲಿ ನಿವೃತ್ತಿ ಘೋಷಣೆ ಮಾಡಲು ಸಿದ್ಧ. ಆದರೆ ಅದು ಗೌರವಯುತವಾಗಿ ಆಗಬೇಕು. ಈ ರೀತಿಯಲ್ಲಿ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ( Jagadish Shettar) ಹೇಳಿದರು.
ದೆಹಲಿಗೆ (Delhi) ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಾನು ಆಕ್ಸಿಡೆಂಟ್ ಆಗಿ ರಾಜಕೀಯಕ್ಕೆ ಬಂದವನು. ಯಾವುದೇ ಸಮಯದಲ್ಲಿ ನಿವೃತ್ತಿ ಆಗಲು ಸಿದ್ಧನಿದ್ದೇನೆ. ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗಡೆ ಹೋಗಬೇಕು. ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ. ಪಾಸಿಟಿವ್ ಹೋಪ್ನಲ್ಲಿ ನಾನಿದ್ದೇನೆ ಎಂದು ತಿಳಿಸಿದರು.
ಪಕ್ಷದ ದೃಷ್ಟಿಯಿಂದ ಎಲ್ಲಾ ಒಳ್ಳೆಯದು ಆಗುತ್ತದೆ ಎಂದು ಹೋಗುತ್ತಿದ್ದೇನೆ. ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಭೇಟಿಯಾಗಬೇಕಿತ್ತು. ಆದರೆ ವಿಮಾನಕ್ಕೆ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಬಿಎಸ್ವೈ ಭೇಟಿ ಮಾಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಯಾವುದೇ ಸ್ಥಾನಮಾನ ಇಲ್ಲದೇ 2 ವರ್ಷದಿಂದ ಪಕ್ಷದಲ್ಲಿದ್ದೇನೆ. ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ. ಎಷ್ಟೋ ಕೆಲಸಗಳನ್ನು ನಮ್ಮ ಮಂತ್ರಿಗಳ ಮುಖಾಂತರ ಮಾಡಿಸಿದ್ದೇನೆ. ನನ್ನ ಸಾಫ್ಟ್ಕಾರ್ನರ್ ಇಲ್ಲಿಯವರೆಗೆ ಬಂದಿದೆ. ರಾಷ್ಟ್ರ ಅಧ್ಯಕ್ಷರನ್ನು ಭೇಟಿಯಾದ ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ವರಿಷ್ಠರ ಭೇಟಿ ನಂತರ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂದರು.
ಸೀನಿಯರ್ಸ್ ಅಂದ್ರೆ ಯಾರು? ವಯಸ್ಸೋ ಅಥವಾ ರಾಜಕಾರಣದಲ್ಲಿ ಸೀನಿಯರ್ಸೋ? ಟಿಕೆಟ್ ಸಿಕ್ಕವರಲ್ಲಿ 75, 76 ವರ್ಷದವರು ಇದ್ದಾರೆ. ಅವರಿಗೆ ಸೀನಿಯರ್ಸ್ ಅನ್ನೋದಿಲ್ವಾ ನೀವು. ರಾಷ್ಟ್ರೀಯ ನಾಯಕರ ಭಾವನೆ ಮೇಲೆ ನನ್ನ ನಿರ್ಧಾರ ಅಡಗಿದೆ ಎಂದು ಹೇಳಿದರು.