ಇತ್ತೀಚೆಗೆ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದ ಜನರು ಮಳೆಗಾಲ ಇರುವುದರಿಂದ ಇದೀಗ ತರಕಾರಿಗಳ ಬೆಲೆ ಇಳಿಕೆಯಿಂದ ಸುಧಾರಿಸಿಕೊಳ್ಳುವಂತಾಗಿದೆ. ಸುಮಾರು ಒಂದೂವರೆ ತಿಂಗಳಿಂದ ಏರುಮುಖದಲ್ಲಿದ್ದ ಟೊಮೇಟೊ ದರ ಸ್ವಲ್ಪ ಇಳಿಕೆಯಾಗಿದ್ದರಿಂದ ಗೃಹಿಣಿಯರಲ್ಲಿ ಸಂತಸ ಮೂಡಿದೆ.
ಈ ಹಿಂದೆ ಚಿಲ್ಲರೆ ದರ ಕೆಜಿಗೆ 90-120 ರೂ.ವರೆಗೆ ಏರಿಕೆಯಾಗಿದ್ದ ಟೊಮೇಟೊ, ಈಗ ಕೆಲವೆಡೆ 30 ರೂ.ಗೆ ಇಳಿದಿದೆ. ಇನ್ನೂ ಕೆಲವೆಡೆ 40-50 ರೂ.ಗೆ ಇಳಿಕೆಯಾಗಿದೆ. ಹೀಗಾಗಿ, ಗ್ರಾಹಕರಲ್ಲಿ ಸ್ವಲ್ಪ ಸಮಾಧಾನ ತಂದಿದೆ. ಟೊಮೇಟೊ ದರ ಏರಿಕೆಯಿಂದ ತತ್ತರಿಸಿ, ಹುಣಸೆಹಣ್ಣಿಗೆ ಮೊರೆ ಹೋಗಿದ್ದ ಗೃಹಿಣಿಯರು, ಈಗ ಟೊಮೇಟೊ ಮತ್ತೆ ಬಳಸಬಹುದೆಂದು ಖುಷಿಪಡುತ್ತಿದ್ದಾರೆ.
ಟೊಮೇಟೊ ದರ ಮಾರುಟ್ಟೆಯಲ್ಲಿ ದಿನದಿಂದ ದಿನಕ್ಕೆ ಕುಸಿಯಲು ಆರಂಭಿಸಿದ ಬೆನ್ನಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ 1ಕೆಜಿ ಗುಣಮಟ್ಟದ ಟೊಮೇಟೊ 60 ರೂ.ಗೆ ಮಾರಾಟವಾಗುತ್ತಿದೆ. ಕೆಲವೇ ದಿನಗಳಲ್ಲಿ ಶ್ರಾವಣ ಆರಂಭಗೊಳ್ಳಲಿದ್ದು ಶುಭ ಸಮಾರಂಭ, ಮದುವೆ, ನಾಮಕಾರಣ ಮತ್ತಿತರ ಶುಭ ಕಾರ್ಯಗಳ ಜತೆಗೆ ಸಾಲು ಸಾಲು ಹಬ್ಬಗಳ ಬರಲಿದ್ದು ಇದೀಗ ಟೊಮೋಟೊ ದರ ಕುಸಿತ ಒಂದು ರೀತಿ ಗ್ರಾಹಕರ ಮೊಗದಲ್ಲಿ ಸಂತಸ ತರಿಸಿದೆ.