ತರೌಬಾ (ಟ್ರಿನಿಡಾಡ್): ವೆಸ್ಟ್ ಇಂಡೀಸ್ (West Indies) ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭರ್ಜರಿ 200 ರನ್ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ (Team India) ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 351 ರನ್ ಗಳಿಸಿತು. ಕಠಿಣ ಸವಾಲನ್ನು ಬೆನ್ನತ್ತಿದ ವಿಂಡೀಸ್ 151 ರನ್ಗಳಿಗೆ ಆಲೌಟ್ ಆಯ್ತು. ಈ ಮೂಲಕ ತವರಿನಲ್ಲಿ ವಿಂಡೀಸ್ ಸತತ 6ನೇ ಸರಣಿ ಸೋತರೆ, ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ (One Day Series) ಗೆದ್ದುಕೊಂಡಂತಾಗಿದೆ.
ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತ್ತು. ಒಂದು ಹಂತದಲ್ಲಿ 88 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯಲ್ಲಿ ಬೌಲರ್ಗಳಾದ ಅಲ್ಜಾರಿ ಜೋಸೆಫ್ 26 ರನ್, ಗುಡಾಕೇಶ್ ಮೋತಿ ಔಟಾಗದೇ 39 ರನ್ ಚಚ್ಚಿದ ಪರಿಣಾಮ ತಂಡದ ಮೊತ್ತ 150 ರನ್ಗಳ ಗಡಿ ದಾಟಿತು.
ಶಾರ್ದೂಲ್ ಠಾಕೂರ್ 4, ಮುಕೇಶ್ ಕುಮಾರ್ 3 ವಿಕೆಟ್ ಪಡೆದರೆ ಕುಲದೀಪ್ ಯಾದವ್ 2, ಜಯದೆವ್ ಉನದ್ಕತ್ 1 ವಿಕೆಟ್ ಪಡೆದರು.
ಭಾರತದ ಭರ್ಜರಿ ಮೊತ್ತ:
ಎರಡು ಪಂದ್ಯಗಳಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ಗಳು ಬೇಗನೇ ಔಟಾಗಿದ್ದು ಬಹಳ ಟೀಕೆಗೆ ಗುರಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಮೊದಲ ವಿಕೆಟ್ಗೆ ಶತಕದ ಜೊತೆಯಾಟ ಬಂದಿತ್ತು. ಇಶಾನ್ ಕಿಶನ್ (Ishan Kishan) ಮತ್ತು ಶುಭಮನ್ ಗಿಲ್ (Shubman Gill) ಮೊದಲ ವಿಕೆಟಿಗೆ 118 ಎಸೆತಗಳಲ್ಲಿ 143 ರನ್ ಜೊತೆಯಾಟವಾಡಿದರು.
ಇಶಾನ್ ಕಿಶನ್ 77 ರನ್ (64 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ಋತ್ರಾಜ್ ಗಾಯಕ್ವಾಡ್ 8 ರನ್ ಗಳಿಸಿ ಔಟಾದದರೂ ನಂತರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಸ್ಯಾಮ್ಸನ್ 51 ರನ್ (41 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದ ಬೆನ್ನಲ್ಲೇ ಶುಭಮನ್ ಗಿಲ್ 85 ರನ್ (92 ಎಸೆತ, 11 ಬೌಂಡರಿ) ಗಳಿಸಿ ಔಟಾದರು.