ಉಡುಪಿ: ಮದ್ಯಪಾನ (alcohol) ವಯಸ್ಸು 21ರಿಂದ 18ಕ್ಕೆ ಇಳಿಕೆ ಖಂಡನೀಯ. ಮದ್ಯಪಾನಕ್ಕೆ ಕಡಿವಾಣ ಹಾಕದೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ (Pramod Muthalik) ಗುಡುಗಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು, ಕಾರ್ಮಿಕರು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಮದ್ಯ ಅಪಾಯಕಾರಿ ಪೇಯ ಎಂಬುವುದು ಎಲ್ಲರಿಗೂ ಗೊತ್ತು. ದೇಶಾದ್ಯಂತ ಮದ್ಯಪಾನವನ್ನು ಬ್ಯಾನ್ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ 75 ವರ್ಷದ ಹಿಂದೆಯೇ ಸಲಹೆ ಕೊಟ್ಟಿದ್ದರು. ಮದ್ಯಪಾನವನ್ನೇ ಅನುಸರಿಸಿ ಸರಕಾರಗಳು ರಾಜಕಾರಣ ಮಾಡುತ್ತಿವೆ. ಸರಕಾರಗಳು ಅಸಹ್ಯಕರ ಪರಿಸ್ಥಿತಿಯ ನಿರ್ಮಾಣ ಮಾಡಿವೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ
ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಮಧ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಮದ್ಯಪಾನ ಡ್ರಗ್ ಮಾಫಿಯಾ ಮೇಲೆ ಹಿಡಿತ ಸಾಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯ ಸರ್ಕಾರ ಈ ದೇಶ ಹಿಂದೆ ಪಡೆಯಬೇಕು. ಮಹಿಳಾ ಮಂಡಳಿಗಳನ್ನು ಒಳಗೊಂಡು ಶ್ರೀರಾಮ ಸೇನೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡುತ್ತದೆ.
ಮಹಿಳಾ ಸಂಘಟನೆಗಳು, ದೇವಸ್ಥಾನದ ಧರ್ಮದರ್ಶಿಗಳು ಮತ್ತು ಪ್ರಜ್ಞಾವಂತರನ್ನು ಒಳಗೊಂಡು ಪ್ರತಿಭಟಿಸುತ್ತದೆ. ಮದ್ಯಪಾನ ಮುಕ್ತ ಸಮಾಜವನ್ನು ಡಾ. ವೀರೇಂದ್ರ ಹೆಗ್ಡೆ ಘೋಷಣೆ ಮಾಡಿದ್ದರು. ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಧನಿಯೆತ್ತಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿಳಿ ಹೇಳಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತ್ತಿಲ್ಲ ಎಂಬ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಗಳಿಗೆ ಇಳಿಕೆ ಮಾಡಲು ಇತ್ತೀಚೆಗೆ ಕರ್ನಾಟಕ ಅಬಕಾರಿ ಪರವಾನಗಿಗಳು ನಿಯಮಗಳು 1967 ಕ್ಕೆ ತಿದ್ದುಪಡಿ ತರಲಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತ್ತಿಲ್ಲ ಎಂದು ಸೆಕ್ಷನ್ 10(1)(ಇ)ನಲ್ಲಿ ಹೇಳಲಾಗಿತ್ತು. ಅದನ್ನು ಬದಲಿಸಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.