ನವದೆಹಲಿ: ಮೊದಲ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರು, ಆ ಅರ್ಜಿಯ ವಿಚಾರಣೆ ಮುಗಿದು ತೀರ್ಪು ಬೀಳುವುದಕ್ಕೂ ಮುಂಚೆಯೇ ಮತ್ತೊಬ್ಬರೊಂದಿಗೆ ಸಹಜೀವನ ನಡೆಸುತ್ತಿದ್ದನ್ನು ಸುಪ್ರೀಂ ಕೋರ್ಟ್ ಬಲವಾಗಿ ಆಕ್ಷೇಪಿಸಿದೆ. ಅದೇ ಕಾರಣಕ್ಕಾಗಿ, ಮಹಿಳೆಗೆ ಹಾಗೂ ಆಕೆಯ 2ನೇ ಪತಿಗೆ ತಲಾ 6 ತಿಂಗಳು ಶಿಕ್ಷೆ ವಿಧಿಸಿದೆ.
ಶಿಕ್ಷೆಯನ್ನು ಇಬ್ಬರೂ ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂದರೆ, ಮಹಿಳೆಯ ಜೊತೆಗೆ ಮಗುವೊಂದು ಇರುವುದರಿಂದ ಆ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ ಮೊದಲು 2ನೇ ಪತಿಯು ಆರು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕು, ಆನಂತರ, ಮಹಿಳೆಯು ಜೈಲಿಗೆ ಶರಣಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಈ ಹಿಂದೆ ಮದ್ರಾಸ್ ಹೈಕೋರ್ಟ್ ಪೀಠ, ಈ ಪ್ರಕರಣದಲ್ಲಿ ಇಬ್ಬರಿಗೂ ಒಂದು ದಿನದ ಶಿಕ್ಷೆಯನ್ನು ವಿಧಿಸಿತ್ತು. ಆದರೆ, ಅವರಿಗೆ ಕೊಟ್ಟಿರುವ ಶಿಕ್ಷೆ ಸಾಲದು ಎಂದು ಮಹಿಳೆಯರ ಮೊದಲನೇ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎರಡೂ ಕಡೆಯ ವಾದ – ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಮೊದಲ ಸಂಗಾತಿಗೆ ವಿಚ್ಛೇದನ ಕೊಡದೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುವುದು ಅಪರಾಧವಾಗಿದೆ.
ಆದರೆ, ಇದಕ್ಕೆ ದೊಡ್ಡ ಶಿಕ್ಷೆಯನ್ನು ಕೊಡದೇ ಇದ್ದರೂ ತೀರಾ ಸಣ್ಣ ಪ್ರಮಾಣದ ಶಿಕ್ಷೆಯನ್ನು ಕೊಡಲಾಗದು. ಮದ್ರಾಸ್ ಹೈಕೋರ್ಟ್ ಕೊಟ್ಟಿರುವ ಶಿಕ್ಷೆಯು ಇರುವೆ ಕಚ್ಚಿದಂಥ ಶಿಕ್ಷೆಯಾಗಿದೆ. ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅದೇ ಕಾರಣಕ್ಕಾಗಿ, ಇಬ್ಬರಿಗೂ ತಲಾ ಆರು ತಿಂಗಳ ಶಿಕ್ಷೆಯನ್ನು ವಿಧಿಸುವುದೇ ಔಚಿತ್ಯವೆನಿಸುತ್ತದೆ ಎಂದು ಹೇಳಿದೆ.