ಆಂದ್ರದ ಖ್ಯಾತ ಜ್ಯೋತಿಷಿ, ಅದರಲ್ಲೂ ಸಿನಿ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಹಲವು ಸೆಲಬ್ರಿಟಿಗಳ ಜ್ಯೋತಿಷ್ಯ ಹೇಳುವ ಮೂಲಕ ಖ್ಯಾತಿ ಘಳಿಸಿದ್ದ ಜ್ಯೋತಿಷಿ ವೇಣುಸ್ವಾಮಿಯವರ ಗ್ರಹಚಾರ ಕೆಟ್ಟಂತಿದೆ. ಇದುವರೆಗೂ ಸಿನಿಮಾ ರಂಗದ ಘಟಾನುಘಟಿಗಳ ಭವಿಷ್ಯ ನುಡಿದು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ವೇಣುಸ್ವಾಮಿ ತಮ್ಮ ಪತ್ನಿ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.’
ವೇಣುಸ್ವಾಮಿ ಪತ್ನಿ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ಈ ಸುದ್ದಿ ಹೈದರಾಬಾದ್ನಲ್ಲಿ ಭಾರೀ ಸಂಚಲನ ಮೂಡಿಸಿದೆ. ವೇಣುಸ್ವಾಮಿ ಹಾಗೂ ಅವರ ಪತ್ನಿ ವೀಣಾ ಶ್ರೀವಾಣಿ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೇ ವೇಣುಸ್ವಾಮಿ ತೆಲುಗು ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಲಿಪಾಲ ವೈವಾಹಿಕ ಜೀವನದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದರು. ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ ಮೆಂಟ್ ಮಾಡಿಕೊಂಡ ಮರುದಿನವೇ ಚೈತನ್ಯ ಹಾಗೂ ಶೋಭಿತಾ ಮದುವೆಯಾದರೆ ತುಂಬಾ ವರ್ಷ ಒಟ್ಟಿಗೆ ಇರೋದಿಲ್ಲ ಎಂದು ಹೇಳಿದ್ದರು.
ಶೋಭಿತಾ ಜಾತಕ ಸರಿ ಇಲ್ಲ. ನಾಗಚೈತನ್ಯ ಹಾಗೂ ಶೋಭಿತಾ ಸಾಂಸಾರಿಕ ಜೀವನ ಮತ್ತೋರ್ವ ಮಹಿಳೆಯಿಂದ ಹಾಳಾಗುತ್ತದೆ ಅಂತ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಇದಾದ ಮೇಲೆ ವೇಣುಸ್ವಾಮಿಗೆ ಅಲ್ಲಿನ ಮಹಿಳಾ ಆಯೋಗ ನೋಟಿಸ್ ನೀಡಿತ್ತು ಎನ್ನಲಾಗಿದೆ.
ಇದೀಗ ವೇಣುಸ್ವಾಮಿ ಹಾಗೂ ಪತ್ನಿ ವೀಣಾ ಶ್ರೀವಾಣಿ ಇಬ್ಬರೂ ಜೊತೆಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರಂತೆ. ವೀಣಾ ಶ್ರೀವಾಣಿ ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ತಾವು ಹಾಗೂ ಪತಿ ವೇಣುಸ್ವಾಮಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿರೋದಾಗಿ ಹೇಳಿದ್ದಾರೆ.
ತೆಲಂಗಾಣದ ಜನಪ್ರಿಯ ವಾಹಿನಿಯಲ್ಲಿ ಕೆಲಸ ಮಾಡುವ ಹಿರಿಯ ಪತ್ರಕರ್ತರೊಬ್ಬರು 5 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ವೇಣುಸ್ವಾಮಿ ಹಾಗೂ ವೀಣಾ ಶ್ರೀವಾಣಿ ಆರೋಪಿಸಿದ್ದಾರೆ. ಆ ಪತ್ರಕರ್ತ ನಮಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ ಅಂತಲೂ ಆರೋಪಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಆ ಹಿರಿಯ ಪತ್ರಕರ್ತ ಹಾಗೂ ವೇಣುಸ್ವಾಮಿ ನಡುವೆ ಜಗಳ ನಡೆಯುತ್ತಂತೆ. ಜಾತಕದ ಹೆಸರಲ್ಲಿ ವೇಣುಸ್ವಾಮಿ ಮೋಸ ಮಾಡುತ್ತಿದ್ದಾರೆ ಅಂತಾರೆ ಪತ್ರಕರ್ತ ಖಾಸಗಿ ವಾಹಿನಿಯಲ್ಲಿ ಡಿಬೇಟ್ನಲ್ಲಿ ಆರೋಪಿಸಿದ್ದರಂತೆ. 2017ರಿಂದ ಆ ಪತ್ರಕರ್ತ ನನ್ನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ನನ್ನನ್ನು ನಾಶಮಾಡಲು ಗಂಭೀರ ಪ್ರಯತ್ನಗಳು ನಡೆದವು. ಅವರು ಕೇಳಿದ ಹಣವನ್ನು ನಾನು ಕೊಡಲಿಲ್ಲ. ಕಳೆದ ಎಂಟು ತಿಂಗಳಿಂದ ಆ ಪತ್ರಕರ್ತ ಹಾಗೂ ಟೀಂ ನನ್ನ ಮೇಲೆ ಹಲ್ಲೆ ನಡೆಸಲು ಆರಂಭಿಸಿತ್ತು ಅಂತ ವೇಣುಸ್ವಾಮಿ ಆರೋಪಿಸಿದ್ದಾರೆ.
ಹಣ ಪಡೆದು ಕೆಲ ಜ್ಯೋತಿಷಿಗಳು ಬಂದು ಟಿವಿಯಲ್ಲಿ ನನ್ನ ವಿರುದ್ಧ ಚರ್ಚೆ ಮಾಡುತ್ತಿದ್ದಾರೆ. ನನ್ನ ಬಗ್ಗೆ ಕೆಟ್ಟ ಪ್ರಚಾರ ಮಾಡಲು ಆ ಹಿರಿಯ ಪತ್ರಕರ್ತ ಮೂರ್ತಿ ಪ್ರಯತ್ನ ಮಾಡುತ್ತಿದ್ದಾರೆ ಅಂತ ವೇಣುಸ್ವಾಮಿ ಆರೋಪಿಸಿದ್ದಾರೆ. ಹಲವರ ಸಮಸ್ಯೆಗಳನ್ನು ದೂರ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತಿದ್ದೆ ಅಂತ ಹೇಳಿದ್ದಾರೆ. ಆ ಪತ್ರಕರ್ತ ನನ್ನ ಮಾನಸಿಕ ಸ್ಥಿರತೆಗೆ ಧಕ್ಕೆ ತಂದಿದ್ದಾರೆ. ಕಳೆದ 8 ತಿಂಗಳಲ್ಲಿ ನಾನು ಸುಮಾರು 15 ಕೆಜಿ ಕಳೆದುಕೊಂಡಿದ್ದೇನೆ. ಇದಕ್ಕೆಲ್ಲಾ ಕಾರಣವೇನು ನೋಡಿ ಎಂದು ವೇಣು ಸ್ವಾಮಿ ದಂಪತಿ ಆಡಿಯೋ ಬಿಡುಗಡೆ ಮಾಡಿದ್ದಾರೆ.