ನಟ, ನಟಿಯರಂತೆ ಹಾಸ್ಯ ಕಲಾವಿದರು ದೊಡ್ಡ ಮಟ್ಟದಲ್ಲಿ ಹೆಸರು ಹಾಗೂ ಜನಪ್ರಿಯತೆ ಗಳಿಸುವುದು ತೀರಾ ಕಡಿಮೆ. ಆದರೆ ಕೆಲವೇ ಕೆಲವು ಹಾಸ್ಯ ನಟರು ಸ್ಟಾರ್ ನಟರಷ್ಟೆ ಜನಪ್ರಿಯತೆ, ಅಭಿಮಾನಿಗಳನ್ನು ಹೊಂದಿದ್ದಾರೆ ಅವರಲ್ಲಿ ಬಾಲಿವುಡ್ ಹಾಸ್ಯ ನಟ ರಾಜ್ಪಾಲ್ ಯಾದವ್ ಕೂಡ ಒಬ್ಬರು. ದಶಕಗಳಿಂದಲೂ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆ, ದೇಹಭಾಷೆ, ಡೈಲಾಗ್ ಡೆಲಿವರಿಯಿಂದ ಪ್ರೇಕ್ಷಕರನ್ನೂ ರಂಜಿಸುತ್ತಾ ಬಂದಿರುವ ರಾಜ್ಪಾಲ್ ಯಾದವ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಸಾಲದ ಬದಲಾಗಿ ಸಿಬಿಐ ನವರು ರಾಜ್ಪಾಲ್ ಯಾದವ್ಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ರಾಜ್ಪಾಲ್ ಯಾದವ್ ಅವರಿಗೆ ಸೇರಿದ್ದು ಎನ್ನಲಾಗಿರುವ ಉತ್ತರ ಪ್ರದೇಶದ ಶಹಜಾನ್ಪುರದಲ್ಲಿರುವ ಆಸ್ತಿಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ರಾಜ್ಪಾಲ್ ಯಾದವ್ ಈ ಜಮೀನನ್ನು ಖರೀದಿ ಮಾಡಿದ್ದರು. ಅಸಲಿಗೆ ರಾಜ್ಪಾಲ್ ಯಾದವ್ ಬಹಳ ವರ್ಷಗಳ ಹಿಂದೆ ತಮ್ಮ ಪೋಷಕರಾದ ನೌರಂಗ್ ಮತ್ತು ಗೋಧಾವರಿ ಅವರುಗಳ ಹೆಸರಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭ ಮಾಡಿದ್ದರು. ಅದಕ್ಕೆ ನೌರಂಗ್-ಗೋಧಾವರಿ ಎಂಟರ್ಟೈನ್ಮೆಂಟ್ ಎಂದು ಹೆಸರಿಟ್ಟಿದ್ದರು.
ನೌರಂಗ್-ಗೋಧಾವರಿ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಗೆ ರಾಜ್ಪಾಲ್ ಯಾದವ್ರ ಪತ್ನಿ ರಾಧಾ ಮಾಲಕಿ ಆಗಿದ್ದರು. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದರು ರಾಜ್ಪಾಲ್ ಯಾದವ್. ಆ ಸಿನಿಮಾಕ್ಕೆ ಶಹಜಾನ್ಪುರದ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡಿದ್ದರು. ಸಿನಿಮಾದಲ್ಲಿ ದಿವಂಗತ ಓಂ ಪುರಿ ಸಹ ನಟಿಸಿದ್ದರು. ಆ ಸಿನಿಮಾ ನಿರ್ಮಾಣಕ್ಕೆ ಶಹಜಾನ್ಪುರದಲ್ಲಿನ ಜಮೀನು ಅಡವಿಟ್ಟು ಮೂರು ಕೋಟಿ ಸಾಲ ಪಡೆದಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಯ್ತು. ರಾಜ್ಪಾಲ್ ಯಾದವ್ಗೆ ಸಾಲ ಮರುಪಾವತಿ ಮಾಡಲು ಆಗಲಿಲ್ಲ.
ಮೂರು ಕೋಟಿ ರೂಪಾಯಿ ಸಾಲ ಬಡ್ಡಿ, ಇನ್ನಿತರೆ ಶುಲ್ಕ, ದಂಡಗಳು ಸೇರಿಕೊಂಡು ಈಗ 11 ಕೋಟಿ ರೂಪಾಯಿಗಳಾಗಿದ್ದು, ನೊಟೀಸ್ಗಳನ್ನು ಕಳಿಸಿ-ಕಳಿಸಿ ಸುಸ್ತಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ಇದೇ ತಿಂಗಳ ಎರಡನೇ ವಾರದಲ್ಲಿ ಶಹಜಾನ್ಪುರಕ್ಕೆ ತೆರಳಿ ರಾಜ್ಪಾಲ್ ಯಾದವ್ ಅವರಿಗೆ ಸೇರಿದ ಅಡವಿಟ್ಟಿದ್ದ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಪಾಲ್ ಯಾದವ್ 25 ವರ್ಷಗಳಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಬಾಲಿವುಡ್ನ ಅತ್ಯುತ್ತಮ ನಟರಲ್ಲಿ ರಾಜ್ಪಾಲ್ ಯಾದವ್ ಸಹ ಒಬ್ಬರು. ಬಾಲಿವುಡ್ನ ಎಲ್ಲ ಸ್ಟಾರ್ ನಟರು, ನಿರ್ದೇಶಕರೊಟ್ಟಿಗೆ ರಾಜ್ಪಾಲ್ ಯಾದವ್ ಕೆಲಸ ಮಾಡಿದ್ದಾರೆ. ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿಯೂ ಸಹ ರಾಜ್ಪಾಲ್ ಯಾದವ್ ಕೆಲಸ ಮಾಡಿದ್ದಾರೆ. ಬಾಲಿವುಡ್ನಲ್ಲಿ ಜಾನಿ ಲಿವರ್ ಬಳಿಕ ಅತ್ಯಂತ ಯಶಸ್ವಿ ಕಮಿಡಿಯನ್ ಎಂದರೆ ಅದು ರಾಜ್ಪಾಲ್ ಯಾದವ್ ಆಗಿದ್ದಾರೆ.