ಖ್ಯಾತ ಚಲನಚಿತ್ರ ನಿರ್ಮಾಪಕ ಪ್ರೀತಿಶ್ ನಂದಿ ನಿಧನರಾಗಿದ್ದಾರೆ. ಜನವರಿ 8ರಂದು ಸಂಜೆ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ನಟ ಅನುಪಮ್ ಖೇರ್ ನಿರ್ಮಾಪಕ ಪ್ರೀತಿಶ್ ನಂದಿ ಅವರ ಸಾವಿನ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದ್ದಾರೆ. “ನನ್ನ ಅತ್ಯಂತ ಪ್ರೀತಿಯ ಮತ್ತು ಆಪ್ತ ಸ್ನೇಹಿತರಲ್ಲಿ ಒಬ್ಬರಾದ ಪ್ರೀತಿಶ್ ನಂದಿ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖ ಮತ್ತು ಆಘಾತವಾಗಿದೆ. ಅದ್ಭುತ ಕವಿ, ಬರಹಗಾರ, ಚಲನಚಿತ್ರ ನಿರ್ಮಾಪಕ ಮತ್ತು ಧೈರ್ಯಶಾಲಿ ಮತ್ತು ಅನನ್ಯ ಸಂಪಾದಕ/ಪತ್ರಕರ್ತ. ಮುಂಬೈನಲ್ಲಿ ನನ್ನ ಆರಂಭಿಕ ದಿನಗಳಲ್ಲಿ ಅವರು ನನ್ನ ಅತ್ಯಂತ ದೊಡ್ಡ ಬೆಂಬಲ ವ್ಯವಸ್ಥೆ ಮತ್ತು ನನ್ನ ಶಕ್ತಿಯ ಅತ್ಯಂತ ದೊಡ್ಡ ಮೂಲವಾಗಿದ್ದರು. ನಮ್ಮಿಬ್ಬರ ನಡುವೆ ಹಲವು ಸಾಮ್ಯತೆಗಳಿದ್ದವು ಎಂದು ಅನುಪಮ್ ಕೇರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
“ನಾನು ಭೇಟಿಯಾದವರಲ್ಲಿ, ಅವರು ಅತ್ಯಂತ ನಿರ್ಭೀತ ವ್ಯಕ್ತಿಗಳಲ್ಲಿ ಒಬ್ಬರು. ಯಾವಾಗಲೂ ಲಾರ್ಜರ್ ದ್ಯಾನ್ ಲೈಫ್. ನಾನು ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ನಾವು ಆಗಾಗ್ಗೆ ಭೇಟಿಯಾಗುತ್ತಿರಲಿಲ್ಲ, ಆದರೆ ಒಂದು ಕಾಲವಿತ್ತು, ಅದು ಅಪ್ರತಿಮವಾಗಿತ್ತು. ಅವರು ನನ್ನನ್ನು ಫಿಲ್ಮ್ಫೇರ್ನ ಮುಖಪುಟದಲ್ಲಿ ಮತ್ತು ಅತ್ಯಂತ ಮುಖ್ಯವಾಗಿ ದಿ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಸ್ಥಾನ ನೀಡುವ ಮೂಲಕ ನನಗೆ ಆಶ್ಚರ್ಯವನ್ನುಂಟುಮಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಿಜವಾಗಿಯೂ ಗೆಳೆಯರ ಗೆಳೆಯರಾಗಿದ್ದರು. ನಾನು ನಿಮ್ಮನ್ನು ಮತ್ತು ನಿಮ್ಮೊಂದಿಗೆ ಕಳೆದ ಸಮಯವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ನನ್ನ ಸ್ನೇಹಿತ ಎಂದು ಅನುಪಮ್ ಖೇರ್ ಭಾವುಕ ಪೋಸ್ಟ್ ಮಾಡಿದ್ದಾರೆ.
ಜನವರಿ 15, 1951 ರಂದು ಬಿಹಾರದ ಭಾಗಲ್ಪುರದಲ್ಲಿ ಪ್ರೀತಿಶ್ ನಂದಿ ಜನಿಸಿದರು. ತಮ್ಮ 74 ನೇ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ 8 ದಿನಗಳ ಮೊದಲು ಅವರು ಜಗತ್ತಿಗೆ ವಿದಾಯ ಹೇಳಿದರು. ಚಲನಚಿತ್ರ ನಿರ್ಮಾಪಕರಾಗಿರುವುದರ ಜೊತೆಗೆ ಅವರು ಕವಿ, ಚಿತ್ರಕಾರ, ಪತ್ರಕರ್ತ, ಮಾಜಿ ಸಂಸದ, ಮಾಧ್ಯಮ ಮತ್ತು ಟಿವಿ ವ್ಯಕ್ತಿತ್ವ, ಪ್ರಾಣಿ ಹಕ್ಕುಗಳ ಕಾರ್ಯಕರ್ತರೂ ಆಗಿದ್ದರು. 1998 ರಲ್ಲಿ ಶಿವಸೇನಾ ಟಿಕೆಟ್ನಲ್ಲಿ ಅವರು ರಾಜ್ಯಸಭಾ ಸಂಸದರಾಗಿ ಆಯ್ಕೆಯಾದರು ಮತ್ತು 6 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1977 ರಲ್ಲಿ ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು.