ಮೃತ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಮ್ಮ ಪೊಲೀಸರು ಯಾರ ಒತ್ತಡಕ್ಕೆ ಮಣಿಯದೆ, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಪ್ರಕರಣವನ್ನು ಉತ್ತಮವಾಗಿ ತನಿಖೆ ನಡೆಸುತ್ತಿದೆ.
ಇದರಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಬಹು ಬೇಗನೇ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಈ ಕೇಸನ್ನು ಸಿಬಿಐಗೆ ವಹಿಸುವುದಿಲ್ಲ ಎಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಕುಟುಂಬದವರಿಗೆ ಅಲ್ಲದೆ ನಮಗೂ ಸಹ ನೋವು ತಂದಿದೆ ಎಂದರು. ಸರ್ಕಾರ ಯಾವುದೇ ಮುಲಾಜಿಲ್ಲದೆ, ಯಾರ ಒತ್ತಡಕ್ಕೆ ಮಣಿಯದೆ ತನಿಖೆ ಮಾಡುತ್ತಿದೆ. ಈಗಾಗಲೇ 17 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಕುಟುಂಬದಲ್ಲಿ ಗಂಡನನ್ನು ಕಳೆದುಕೊಂಡ ಅವರ ಪತ್ನಿ ಮದುವೆಯಾಗಿ ಒಂದು ವರ್ಷ ಆಗಿದೆ.
ಅವರು ನಮಗೆ ಮನವಿ ಮಾಡಿದ್ದಾರೆ. ಅವರ ಮನವಿಗೆ ನ್ಯಾಯ ಒದಗಿಸಬೇಕು. ಜೀವನ ಸಾಗಿಸಲು ಸರ್ಕಾರಿ ನೌಕರಿ ಕೊಡಬೇಕು ಎಂಬುದು ಅವರ ಆಗ್ರಹವಾಗಿದೆ. ಇದರ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು. ‘ ಇದರಲ್ಲಿ ಯಾವುದು ರಾಜಕೀಯ ಮಾಡಬಾರದು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅದನ್ನು ಮಾಧ್ಯಮಗಳ ಮೂಲಕ ಕೇಳಿದ್ದೇನೆ. ಇದರಲ್ಲಿ ರಾಜಕೀಯ ಸಲ್ಲದು. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು. ಕಾನೂನು ಇದೆ. ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.