ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು 13 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಳೆದು ಮೂರು ದಿನಗಳಿಂದ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿದ್ದು ಈ ಮಧ್ಯೆ ಪ್ರಕರಣದ 8ನೇ ಆರೋಪಿ-ಚಾಲಕ ರವಿ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದಾನೆ.
ಕುರುಬರಹಟ್ಟಿ ಗ್ರಾಮದ ನಿವಾಸಿಯಾಗಿರುವ ರವಿ, ರೇಣುಕಾಸ್ವಾಮಿಯನ್ನ ರಘು ಮತ್ತು ಗ್ಯಾಂಗ್ ಜೊತೆ ಸೇರಿ ಬೆಂಗಳೂರಿಗೆ ತನ್ನ ಇಟಿಯೋಸ್ ಕಾರಿನಲ್ಲಿ ಬೆಂಗಳೂರಿಗೆ ಕರೆತಂದಿದ್ದ. ಪ್ರಕರಣದ ದೊಡ್ಡದಾಗುತ್ತಿದ್ದಂತೆ ತಲೆ ತಪ್ಪಿಸಿಕೊಂಡಿದ್ದ. ಆದರೆ ತಾನಾಗಿಯೇ ಬಂದು ಚಿತ್ರದುರ್ಗ DYSP ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
ಜೂ8 ಶನಿವಾರ ಬೆಳಗ್ಗೆ ಹತ್ತು ಗಂಟೆ ವೇಳೆಗೆ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಲಾಗಿತ್ತು. ಆರೋಪಿಗಳಾದ ರಾಘವೇಂದ್ರ, ಜಗ್ಗ, ಅನು ಸೇರಿ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆತರಲು ಪ್ಲಾನ್ ಮಾಡಿದ್ದರು. ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ರೇಣುಕಾಸ್ವಾಮಿ ಬೈಕ್ ನಿಲ್ಲಿಸಿ ರವಿ ಕಾರಿನಲ್ಲಿ ಕರೆದೊಯ್ದಿದ್ದರು. ಜಗ್ಗ ಎಂಬಾತ ರವಿ ಬಳಿ 4000 ರೂಗೆ ಬಾಡಿಗೆ ಮಾತನಾಡಿದ್ದ. ಕಾರಲ್ಲಿ ಕರೆದೊಯ್ಯುವಾಗ ಸ್ವಲ್ಪವೂ ಅನುಮಾನ ಬರದಂತೆ ನಡೆದುಕೊಂಡಿದ್ದರು. ಆದರೆ ದರ್ಶನ್ ಆರೋಪಿಯಾಗಿ ಅರೆಸ್ಟ್ ಆಗುತ್ತಿದ್ದಂತೆ ರವಿಗೆ ಭಯ ಶುರುವಾಗಿತ್ತು. ಸ್ನೇಹಿತ ಸಂತೋಶ್ ಬಳಿ ನನಗೆ ಸಾಯುವಷ್ಟು ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.
ಪೊಲೀಸರಿಗೆ ಶರಣಾಗಿರುವ ರವಿ, ತನಗೆ ಈ ಘಟನೆ ಬಗ್ಗೆ ಏನೇನು ತಿಳಿದಿಲ್ಲ. ನಾಲ್ವರು ಟೂರ್ ಮಾದರಿಯಲ್ಲಿ ಬಂದಿದ್ದರು. ಬಾಡಿಗೆ ಹಣಕ್ಕಾಗಿ ಬೆಂಗಳೂರಿಗೆ ಹೋಗಲು ಒಪ್ಪಿಕೊಂಡಿದ್ದೆ. ಬೆಂಗಳೂರಿಗೆ ಹೋಗುತ್ತಿದ್ದಂತೆ ಶೆಡ್ ಒಳಗೆ ಕಾರು ನಿಲ್ಲಿಸಲು ಹೇಳಿದರು. ಅವರನ್ನ ಒಳಗೆ ಬಿಟ್ಟು ತಾನು ಹೊರಗೆ ಬಂದೆ. ಅಲ್ಲಿ ಏನಾಗಿದೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ. ಟ್ಯಾಕ್ಸಿ ನಿಲ್ದಾಣದ ಮುಖಂಡರು, ಬಾಡಿಗೆ ಮಾತನಾಡುವಾಗ ಇದ್ದವರು, ರವಿಯನ್ನ ಪೊಲೀಸರ ಮುಂದೆ ಶರಣಾಗು, ಶಿಕ್ಷೆ ಕಡಿಮೆಯಾಗುತ್ತದೆ ಮನವೊಲಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ