ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕೊಳಗಾಗಿರುವವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ತಮ್ಮ ಮಕ್ಕಳು ಅಮಾಯಕರು, ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಗಳ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಈ ಮಧ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅನು ಅಲಿಯಾಸ್ ಅನುಕುಮಾರ್ ಮನೆಯಲ್ಲಿ ಮತ್ತೊಂದು ದುರಂತ ನಡೆದಿದೆ.
ಮಗನ ಬಂಧನದ ಬಳಿಕ ಚಿಂತೆಗೆ ಒಳಾಗಿದ್ದ ಅನುಕುಮಾರ್ ತಂದೆ ಚಂದ್ರಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಮುಂತಾದವರ ಜೊತೆ 7ನೇ ಆರೋಪಿಗಾಗಿ ಅನು ಅರೆಸ್ಟ್ ಆಗಿದ್ದಾನೆ. ಇದರಿಂದಾಗಿ ಅವರ ಕುಟುಂಬಕ್ಕೆ ಆಘಾತ ಆಗಿದೆ. ಅದರ ಬೆನ್ನಲ್ಲೇ ಅನು ತಂದೆ ಚಂದ್ರಣ್ಣ ಮೃತಪಟ್ಟಿದ್ದಾರೆ.
ಅನುಕುಮಾರ್ ತಂದೆ ಚಂದ್ರಣ್ಣ ಅವರಿಗೆ 60 ವರ್ಷ ವಯಸ್ಸಾಗಿತ್ತು. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅನು ಬಂಧನ ಆಗಿತ್ತು. ಮಗನ ಬಂಧನದ ಬಳಿಕ ಚಂದ್ರಣ್ಣ ಆಘಾತಕ್ಕೆ ಒಳಗಾಗಿದ್ದರು. ಹೀನಾಯ ಕೃತ್ಯದಲ್ಲಿ ಮಗ ಭಾಗಿ ಆಗಿದ್ದಾನೆ ಎಂಬ ಆರೋಪ ಎದುರಾಗಿದ್ದರಿಂದ ಚಂದ್ರಣ್ಣ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಚಿತ್ರದುರ್ಗದ ಸಿಹಿನೀರು ಹೊಂಡ ಬಳಿಯಿರುವ ಮನೆಯಲ್ಲಿ ಅನು ತಂದೆ ಚಂದ್ರಣ್ಣ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ.