ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕೊಳಗಾಗಿದ್ದಾರೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಕೊಲೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದರ್ಶನ್ ಅವರ ಈ ನಡೆಯಿಂದ ಕಂಗಾಲಾಗಿರುವ ಪತ್ನಿ ವಿಜಯಲಕ್ಷ್ಮೀ, ಇನ್ಸ್ಟಾಗ್ರಾಂನಲ್ಲಿ ದರ್ಶನ್ರನ್ನು ಅನ್ಫಾಲೋ ಮಾಡಿ, ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ದರ್ಶನ್ಗೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ದರ್ಶನ್ ಅವರ ಕುಟುಂಬ ಸಹ ನಟನಿಂದ ಪ್ರಕರಣದಿಂದ ಅಂತರ ಕಾಯ್ದುಕೊಂಡಿದೆ.
ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಮತ್ತು ಸಹೋದರ ದಿನಕರ್ ತೂಗುದೀಪ್ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನೆಲೆಸಿರುವ ಮೀನಾ ತೂಗುದೀಪ್, ದರ್ಶನ್ ಬಗ್ಗೆ ಮಾತನಾಡಲು ಒಪ್ಪುತ್ತಿಲ್ಲ. ದಿನಕರ್ ಕೂಡ ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ದರ್ಶನ್ ಅವರು ಈಗಾಗಲೇ ತಾಯಿ ಜತೆ ಜಗಳ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಮೀನಾ ತೂಗುದೀಪ್ ಅವರು ತಮ್ಮ ಕಿರಿಯ ಪುತ್ರ ದಿನಕರ್ ಕುಟುಂಬದ ಜತೆ ಇರುವುದಾಗಿ ತಿಳಿದುಬಂದಿದೆ. ತಾನು ಹುಟ್ಟಿ ಬೆಳೆದ ಮೈಸೂರಿನಲ್ಲಿರುವ ಮನೆಗೆ ದರ್ಶನ್ ಇತ್ತೀಚಿಗೆ ಒಮ್ಮೆಯೂ ಬಂದಿಲ್ಲ ಎಂದು ಹೇಳಲಾಗಿದೆ. ದರ್ಶನ್ ಅವರ ನಿರಂತರ ವಿವಾದಗಳಿಂದ ಇಡೀ ಕುಟುಂಬ ಬೇಸತ್ತಿರುವುದಾಗಿ ತಿಳಿದುಬಂದಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.