ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ನಡೆಯಿಂದ ಸಾಕಷ್ಟು ಮಂದಿ ಅಸಮಾಧಾನ ಗೊಂಡಿದ್ದಾರೆ. ಘಟನೆಯ ಕುರಿತು ಪರ-ವಿರೋಧ ಚರ್ಚೆಗಳು ಆಗುತ್ತಲೇ ಇವೆ. ಇದೀಗ ಘಟನೆಯ ಕುರಿತು ವಿ.ಮನೋಹರ್ ಪ್ರತಿಕ್ರಿಯಿಸಿದ್ದಾರೆ.
“ಇದು ಆಕಸ್ಮಿಕವಾಗಿ ನಡೆದುಹೋಗಿದೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ. ಸಾವಿರಾರು ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಸಂದೇಶ ಕಳುಹಿಸಿರುವ ವಿಕೃತಕಾಮಿ ಅವನು. ಅವನ ಪಾಪದ ಕೊಡ ತುಂಬಿದೆ, ಅದಕ್ಕೆ ತಕ್ಕ ಶಿಕ್ಷೆಯಾಗಿದೆ. ಆದರೆ ಇದು ಪೊಲೀಸ್ ಅವರಿಂದ ಆಗಬೇಕಿತ್ತು. ಆದರೆ ದರ್ಶನ್ ಸರ್ ಬ್ಯಾಡ್ ಟೈಂ ಆಗಿರಬಹುದು. ಅವರು ಆ ಕಳಂಕದಿಂದ ಹೊರಬಂದು ಮೊದಲಿನಂತೆ ಸಿನಿಮಾದಲ್ಲಿ ನಟನೆ ಮಾಡಲಿ ಎಂದು ವಿ ಮನೋಹರ್ ಹೇಳಿದ್ದಾರೆ.
ದರ್ಶನ್ ಹೀರೋ ಆಗುವ ಮೊದಲೇನೇ ‘ಜನುಮದ ಜೋಡಿ’ ಚಿತ್ರಕ್ಕೆ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ರಲ್ವಾ ಆವಾಗಲೇ ಪರಿಚಯ ಇತ್ತು. ಆಗಾಗ ಮುಹೂರ್ತ ಕಾರ್ಯಕ್ರಮಗಳಲ್ಲಿ ಸಿಗುತ್ತಾ ಇದ್ವಿ. ದರ್ಶನ್ ಬಹಳ ಸಹೃದಯಿ ಮನುಷ್ಯ. ಅನೇಕರಿಗೆ ಕಷ್ಟದಲ್ಲಿ ಸಹಾಯ ಮಾಡಿದ್ದಾರೆ. ‘ಲಾಲಿಹಾಡು’ ಸಿನಿಮಾ ಸಮಯದಲ್ಲಿ ನನಗೂ ಸಹಾಯ ಮಾಡಿದ್ದರು. ಕೆಲಸ ಮಾಡುವಾಗ ನನಗೆ ಡಯಟ್ ಮಾಡೋದು ಹೇಗೆ? ಯಾವ ವ್ಯಾಯಾಮ ಮಾಡಬೇಕು ಎಲ್ಲಾ ಹೇಳ್ತಿದ್ದರು. ಅದಾದ್ಮೇಲೆ ಮಧ್ಯೆ ಗ್ಯಾಪ್ ಆಯ್ತು ಎಂದು ವಿ.ಮನೋಹರ್ ಮಾತನಾಡಿದ್ದಾರೆ.
ಇತ್ತೀಚೆಗೆ ಈ ಘಟನೆ ಆಗೋ ಮೂರು ದಿನದ ಮುಂಚೆ ನಾನು ಫೋನ್ ಮಾಡಿ ಕೇಳಿದೆ, ದರ್ಶನ್ ಸರ್ ‘ಲಾಲಿಹಾಡು’ ಆದ್ಮೇಲೆ ನಾವು ಮತ್ತೆ ಮಾಡಿಲ್ಲ ಅಂತ. ಖಂಡಿತ ಜೊತೆಯಲಿ ಕೆಲಸ ಮಾಡೋಣ ಎಂದರು. ಅದಾದ್ಮೇಲೆ ಮೂರು ದಿನದಲ್ಲಿ ಈ ಪ್ರಕರಣ ಆಯ್ತು. ಈ ಕಳಂಕದಿಂದ ಅವರು ಹೊರ ಬರಲಿ ಮತ್ತೆ ಸಿನಿಮಾಗಳಲ್ಲಿ ಮಾಡಲಿ. ಇಂಥಹ ದುರ್ಘಟನೆಗಳು ಯಾವತ್ತೂ ಆಗದೆ ಇರಲಿ ಎಂದು ಆಶಿಸುತ್ತೇನೆ. ದರ್ಶನ್ ಸಿನಿಮಾ ಅಂದರೆ ನೂರಾರು ಜನ ಕೆಲ್ಸ ಮಾಡ್ತಾರೆ. ನೂರಾರು ಜನಕ್ಕೆ ಅನ್ನ ಸಿಗುತ್ತೆ ಎಂದು ಹೇಳಿದ್ದಾರೆ.