ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಫೋಟೋ ಹಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್ , ಪವಿತ್ರಾ ಗೌಡ ಸೇರಿದಂತೆ 14 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಕುರಿತು ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ನಡೆಯನ್ನು ಖಂಡಿಸಿದ್ದಾರೆ.
‘ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವ್ಯಕ್ತಿಯನ್ನು ಬ್ಲಾಕ್ ಮಾಡುವ ಆಯ್ಕೆ ಇದೆ. ಒಂದು ವೇಳೆ ಟ್ರೋಲ್ ಮುಂದುವರಿದರೆ ನೀವು ದೂರು ನೀಡಬಹುದು. ನನ್ನನ್ನು ಕೂಡ ಕೆಟ್ಟ ಪದಗಳಿಂದ ಟ್ರೋಲ್ ಮಾಡಿದ್ದರು. ನನ್ನನ್ನು ಮಾತ್ರವಲ್ಲದೇ ಅನೇಕರನ್ನು ಟ್ರೋಲ್ ಮಾಡಿದ್ದಾರೆ. ಬೇರೆಯವರ ಹೆಂಡತಿ, ಮಕ್ಕಳನ್ನೂ ಬಿಡದೇ ಟ್ರೋಲ್ ಮಾಡಿದ್ದಾರೆ. ಎಂಥ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
‘ಕಾನೂನು ಪಾಲಿಸುವ ಯಾವುದೇ ಪ್ರಜೆಯ ರೀತಿ ನಾನು ಕೂಡ ದೂರು ನೀಡಿದ್ದೇನೆ. ಅಂಥವರಿಗೆ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಪಾಪ ಅಂತ ನಾನು ಕೇಸ್ ವಾಪಸ್ ತೆಗೆದುಕೊಂಡಿದ್ದೇನೆ. ಟ್ರೋಲ್ ಮಾಡಿದ ವ್ಯಕ್ತಿಗಳು ಇನ್ನೂ ಚಿಕ್ಕವರು. ಅವರಿಗೂ ಭವಿಷ್ಯ ಇದೆ. ಯಾವುದೋ ಅನಾಮಧೇಯ ಖಾತೆಗಳ ಮೂಲಕ ಅವರು ಟ್ರೋಲ್ ಮಾಡುತ್ತ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಕಾನೂನನ್ನು ಯಾರೂ ತಮ್ಮ ಕೈಗೆ ತೆಗೆದುಕೊಳ್ಳಬಾರದು. ನೀವು ಹೋಗಿ ಜನರನ್ನು ಹೊಡೆದು ಕೊಲ್ಲುವುದಲ್ಲ. ಒಂದು ಸರಳವಾದ ದೂರು ಸಾಕು. ಈಗ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ನಾನು ಮೆಚ್ಚುಗೆ ಮತ್ತು ಗೌರವ ಸಲ್ಲಿಸುತ್ತೇನೆ. ಅವರದ್ದು ಕೃತಜ್ಞತೆ ಇಲ್ಲದ ಕೆಲಸ. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಅವರು ಮಣಿಯುವುದಿಲ್ಲ ಹಾಗೂ ಕಾನೂನಿನ ಮೇಲೆ ಜನರ ಭರವಸೆಯನ್ನು ಉಳಿಸುತ್ತಾರೆ ಅಂತ ನಾನು ನಂಬಿದ್ದೇನೆ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. #JusticeforRenukaswamy #Darshan #Yedyurappa #PrajwalRevanna ಎಂಬ ಹ್ಯಾಷ್ ಟ್ಯಾಗ್ಗಳನ್ನು ಅವರು ಬಳಸಿದ್ದಾರೆ.