ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಹೊರಬೀಳುತ್ತಿದೆ. ಇದೀಗ ದರ್ಶನ್ ಜೊತೆ ಪಾರ್ಟಿ ಮಾಡಿದ್ದ ನಟರಿಗೂ ಸಮಸ್ಯೆ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ನಡೆಯುವುದಕ್ಕೂ ಮುನ್ನ ದರ್ಶನ್ ಜೊತೆ ಸೇರಿ ಕೆಲವರು ಪಾರ್ಟಿ ಮಾಡಿದ್ರು ಎಂದು ವರದಿ ಆಗಿದೆ. ಪಾರ್ಟಿಯಲ್ಲಿ ಯಾರ್ಯಾರು ಇದ್ದರು, ಏನೆಲ್ಲಾ ಚರ್ಚೆ ನಡೆದಿದೆ ಎನ್ನುವ ಬಗ್ಗೆ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಜೊತೆ ಪಾರ್ಟಿಯಲ್ಲಿದ್ದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆಗೂ ಮುನ್ನ ಆರ್ ಆರ್ ನಗರದಲ್ಲಿರುವ ರೆಸ್ಟೋರೆಂಟ್ ನಲ್ಲಿ ತನ್ನ ಸ್ನೇಹತರು ಹಾಗೂ ಸಹಚರರ ಜೊತೆ ಪಾರ್ಟಿ ಮಾಡಿದ್ದರು ಎನ್ನಲಾಗ್ತಿದೆ. ಈ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಕೂಡ ಇದ್ದರು ಎಂದು ವರದಿ ಆಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಹಾಜರಾಗುವಂತೆ ನಟ ಚಿಕ್ಕಣ್ಣ ಅವರಿಗೂ ನೋಟಿಸ್ ನೀಡಲಾಗಿತ್ತು. ರೆಸ್ಟೋರೆಂಟ್ನಲ್ಲಿ ಮಹಜರು ನಡೆಸಿದ ಬಳಿಕ ಚಿಕ್ಕಣ್ಣ ಅವರ ಬಳಿ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಪಾರ್ಟಿಯಲ್ಲಿ ಮತ್ತೊಬ್ಬ ನಟ ಯಶಸ್ ಸೂರ್ಯ ಕೂಡ ಇದ್ದರು ಎನ್ನಲಾಗಿತ್ತು.
ದರ್ಶನ್ ಆಪ್ತ ಹಾಗೂ ಗರಡಿ ಸಿನಿಮಾದಲ್ಲಿ ನಟಿಸಿರುವ ನಟ ಯಶಸ್ ಸೂರ್ಯ ಕೂಡ ಆರ್ಆರ್ ನಗರದ ರೆಸ್ಟೋರೆಂಟ್ ನಲ್ಲಿ ನಡೆದ ಪಾರ್ಟಿಯಲ್ಲಿ ಇದ್ದರು ಎನ್ನಲಾಗ್ತಿದೆ. ಇದೀಗ ನಟ ಯಶಸ್ ಸೂರ್ಯ ಅವರಿಗೂ ಸಂಕಷ್ಟ ಎದುರಾಗಿದೆ.
ಪ್ರಕರಣ ಸಂಬಂಧ ನಟ ಯಶಸ್ ಸೂರ್ಯಗೆ ಇವತ್ತು ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 19 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.