ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಕಿಡ್ನ್ಯಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಿತ್ತು. ಘಟನೆಯ ಬಳಿಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬಂಧಿಸಿರೋ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದೀಗ ಪ್ರಕರಣದ ನಾಲ್ವಾರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಅವರುಗಳನ್ನು ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಿದ 24ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ತುಮಕೂರು ಜೈಲಿಗೆ ಸ್ಥಳಾಂತರಕ್ಕೆ ಆರೋಪಿಗಳ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಸ್ಥಳಾಂತರ ಅಗತ್ಯದ ಬಗ್ಗೆ ಕೋರ್ಟ್ಗೆ ಎಸ್ಪಿಪಿ ಪಿ.ಪ್ರಸನ್ನಕುಮಾರ್ ವಿವರಣೆ ನಂತರ ಸ್ಥಳಾಂತರಕ್ಕೆ ಆದೇಶಿಸಲಾಯಿತು.
ರೇಣುಕಾಸ್ವಾಮಿಯನ್ನು ನಾವೇ ಕೊಂದಿದ್ದೇವೆಂದು ಹೇಳಿಕೊಂಡು ಮೊದಲು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಶರಣಾಗಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮೂವರು ಬಾಯ್ಬಿಟ್ಟಿದ್ದರಿಂದ ದರ್ಶನ್ ಮತ್ತು ಗ್ಯಾಂಗ್ ಬಂಧನವಾಗಿತ್ತು.
ನಂತರ ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಕಾರು ಚಾಲಕ ರವಿಶಂಕರ್ ಶರಣಾಗಿದ್ದ. ಇಟಿಯೋಸ್ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಟ್ಯಾಕ್ಸಿ ಸಂಘದವರ ಸಹಾಯ ಕೇಳಿಬಂದಿದ್ದ ಚಾಲಕ ರವಿಶಂಕರ್ನನ್ನು ಡಿವೈಎಸ್ಪಿ ಕಚೇರಿಗೆ ಕರೆತಂದು ಟ್ಯಾಕ್ಸಿ ಸಂಘದ ಮುಖಂಡರು ಶರಣಾಗತಿ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ ಇವರುಗಳಿಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ತುಮಕೂರು ಜೈಲಿಗೆ ಸ್ಥಳಾಂತರಿಸಲಾಗಿದೆ.
ಇನ್ನೂ ಪರಪ್ಪನ ಅಗ್ರಹಾರದ ಜೈಲಿನ ಭದ್ರತಾ ವಿಭಾಗದ ಬ್ಯಾರಕ್ ನ ವಿಶೇಷ ಸೆಲ್ನಲ್ಲಿರುವ ದರ್ಶನ್ ಯಾರೊಂದಿಗೂ ಹೆಚ್ಚಿಗೆ ಮಾತನಾಡದೆ ಮೌನಕ್ಕೆ ಶರಣಾಗಿದ್ದರಂತೆ. ಯಾರಾದರು ಬಂದು ಮಾತನಾಡಿಸಿದರೆ ಕಾಟಾಚಾರಕ್ಕೆ ಒಂದೆರಡು ಮಾತನಾಡಿ ಸುಮ್ಮನಾಗುತ್ತಿದ್ದಾರಂತೆ. ಇನ್ನೂ ತಂದೆಯನ್ನು ನೋಡಲು ಬಂದ ಮಗನನ್ನು ತಬ್ಬಿಕೊಂಡು ದರ್ಶನ್ ಕಣ್ಣೀರು ಸುರಿಸಿದ್ದಾರೆ.