ಚಾಮರಾಜನಗರ : ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ ಜಿಲ್ಲೆಯ 329 ಮಂದಿ ಎಂಬತ್ತು ವರ್ಷ ಮೇಲ್ಪಟ್ಟ ವಯೋಮಾನದ ಹಿರಿಯ ನಾಗರಿಕರು ಹಾಗೂ ವಿಕಲಚೇತನ ಮತದಾರರಿಗೆ ಏಪ್ರಿಲ್ 29, 30 ರಂದು ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂಚೆ ಮತದಾನದ ಮೂಲಕ ಮತ ಚಲಾಯಿಸಲು ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೇರಿ ಒಟ್ಟು 329 ಕೋರಿಕೆ ಬಂದಿತ್ತು. ಇವರಲ್ಲಿ 107 ವಿಶೇಷಚೇತನರು ಹಾಗೂ 222 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದಾರೆ. ಏಕ ಮಾದರಿಯಲ್ಲಿ ಎರಡು ದಿನಗಳಂದು ಮತದಾನ ಪ್ರಕ್ರಿಯೆ ನಿಗದಿಪಡಿಸಲಾಗಿದೆ ಎಂದರು.
ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಗೆ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ವೀಡಿಯೋಗ್ರಾಫರ್ ಹಾಗೂ ಇಬ್ಬರು ಪೋಲಿಂಗ್ ಅಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಲಾಗಿದೆ. ಸದರಿ ತಂಡದವರು ರೂಟ್ಮ್ಯಾಪ್ ಅನ್ನು ಮುಂಚಿತವಾಗಿ ಸಿದ್ದಪಡಿಸಿಕೊಂಡಿದ್ದು, ಸೆಕ್ಟರ್ ಅಧಿಕಾರಿಗಳ ವಾಹನದಲ್ಲಿ ರೂಟ್ ಮ್ಯಾಪ್ನಂತೆ ಚುನಾವಣಾ ಆಯೋಗದ ಸೂಚನೆಗಳನ್ವಯ ಮತದಾನ ಪ್ರಕ್ರಿಯೆ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ 80 ಮತ್ತು ಮೇಲ್ಪಟ್ಟ ವಯೋಮಾನದ 23301 ಜನ ಮತದಾರರು ಹಾಗೂ 11977 ವಿಕಲಚೇತನ ಮತದಾರರಿದ್ದಾರೆ. ಎಲ್ಲ ಮತದಾರರಿಗೆ ಬಿಎಲ್ಒಗಳ ಮೂಲಕ ಶೇ. 100ರಷ್ಟು 12ಡಿ (ನಿಗದಿತ ಪ್ರಪತ್ರ) ಅನುಬಂಧವನ್ನು ತಲುಪಿಸಲಾಗಿದೆ. ಇವರಲ್ಲಿ ಕ್ರಮವಾಗಿ 222 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ 107 ವಿಶೇಷಚೇತನ ಮತದಾರರು ಮನೆಯಿಂದಲೇ ಮತ ಚಲಾಯಿಸಲು ಇಚ್ಛಿಸಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಹಾಗೂ ಇತರೆ ಅಗತ್ಯ ಸೇವೆಗಳಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾನದ ಹಕ್ಕು ಹೊಂದಿರುವ ನೌಕರರು ಜಿಲ್ಲಾದ್ಯಂತ ಏಕ ಮಾದರಿಯಲ್ಲಿ ಮೇ. 2, 3, 4 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಪೋಸ್ಟಲ್ ವೋಟಿಂಗ್ ಸೆಂಟರ್ನಲ್ಲಿ ಮತದಾನವನ್ನು ಚುನಾವಣಾ ಆಯೋಗವು ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ಮತದಾನ ಮಾಡಲು ಕ್ರಮವಹಿಸಲಾಗುತ್ತಿದೆ. ವಿವಿಧ ಅಗತ್ಯ ಸೇವಾ ವರ್ಗದಡಿ 262 ಮಂದಿಯ ಪಟ್ಟಿ ಪಡೆದಿದ್ದು ಮತ ಚಲಾಯಿಸಲು ಪೋಸ್ಟಲ್ ವೋಟಿಂಗ್ ಸೆಂಟರ್ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 20ಕ್ಕೆ ಅನ್ವಯವಾಗುವಂತೆ ಜಿಲ್ಲೆಯಲ್ಲಿ 8,61,489 ಮತದಾರರಿದ್ದಾರೆ. ಇದರಲ್ಲಿ 4,26,547 ಪುರುಷರು, 4,34,873 ಮಹಿಳಾ ಮತದಾರರಿದ್ದಾರೆ. ಹನೂರು ಕ್ಷೇತ್ರದಲ್ಲಿ 2,21,557, ಕೊಳ್ಳೇಗಾಲ ಕ್ಷೇತ್ರದಲ್ಲಿ 2,16,602, ಚಾಮರಾಜನಗರ ಕ್ಷೇತ್ರದಲ್ಲಿ 2,09,494, ಗುಂಡ್ಲುಪೇಟೆ ಕ್ಷೇತ್ರದಲ್ಲಿ 2,13,836 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಿಎಸ್. ರಮೇಶ್ ಅವರು ವಿವರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ತಹಶೀಲ್ದಾರ್ ಬಸವರಾಜು, ಚುನಾವಣಾ ತಹಶೀಲ್ದಾರ್ ರವಿಕುಮಾರ್ ವಸ್ತ್ರದ್ ಇತರರು ಸುದ್ದಿಗೋಷ್ಟಿಯಲ್ಲಿ ಇದ್ದರು.