ಚಂಡೀಗಢ: ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಹರಿಯಾಣ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಬಿಜೆಪಿ ನೇತೃತ್ವದ ಸರ್ಕಾರವು ಅಗ್ನಿಪಥ್ ಯೋಜನೆಯ ಮೂಲಕ ಸೇನೆಗೆ ನೇಮಕಗೊಂಡಿರುವ ಪೊಲೀಸ್, ಫಾರೆಸ್ಟ್ ಗಾರ್ಡ್, ಮೈನಿಂಗ್ ವಾರ್ಡ್, ಜೈಲ್ ವಾರ್ಡನ್ ಸೇರಿ ವಿವಿಧ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ ಘೋಷಿಸಿದೆ.
ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಹೊತ್ತಿನಲ್ಲೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ನೇಮಕಾತಿ ವೇಳೆ ಅಗ್ನಿವೀರರಿಗೆ ವಯೋಮಿತಿ ಸಡಿಲಿಕೆ ಸೇರಿ ಹಲವು ರಿಯಾಯ್ತಿಗಳನ್ನು ನೀಡುವುದಾಗಿಯೂ ಸಿಎಂ ನಯಾಬ್ ಸಿಂಗ್ ಸೈನಿ ಪ್ರಕಟಿಸಿದ್ದಾರೆ.
ಗ್ರೂಪ್ ಸಿ ಹುದ್ದೆಗಳ ನೇಮಕಾತಿಯಲ್ಲಿ ಶೇ.5ರ ಷ್ಟು ಮೀಸಲಾತಿ ನೀಡೋದಾಗಿ ಘೋಷಿಸಿದ್ದಾರೆ. ಜೊತೆಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ ಸಿಎಂ ಸೈನಿ ಘೋಷಣೆ ಮಾಡಿದ್ದಾರೆ.
2022ರಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಯೋಜನೆಯಡಿಯಲ್ಲಿ, 4 ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ 25% ಮಂದಿಗೆ ಮಾತ್ರ ಹೆಚ್ಚುವರಿ 15 ವರ್ಷಗಳವರೆಗೆ ಮುಂದುವರಿಯಲು ಅನುಮತಿಸಲಾಗಿದೆ.