ಬೆಂಗಳೂರು: ಸೇವೆಯಿಂದ ವಜಾಗೊಂಡ ನೌಕರ ಮರು ನೇಮಕವಾದಲ್ಲಿ ಗಳಿಕೆ ರಜೆಗೆ ಅರ್ಹ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ (High Court)ಹೇಳಿದೆ. ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಸಿಬ್ಬಂದಿಗೆ ಗಳಿಕೆ ರಜೆ ನಗದು ಪಾವತಿಸುವಂತೆ ಸೂಚಿಸಿದೆ. ಸಿಬ್ಬಂದಿ ಸೇವೆಯಿಂದ ವಜಾಗೊಂಡಿದ್ದ ಅವಧಿಗೆ ಗಳಿಕೆ ರಜೆ ನಗದು ಪಡೆಯುವಂತಿಲ್ಲ ಎಂಬುದಾಗಿ ಕೆಎಸ್ಆರ್ಟಿಸಿ ಪರ ಮಂಡಿಸಿದ ವಕೀಲರ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.
ಅಲ್ಲದೇ, ಕೆಎಸ್ಆರ್ಟಿಸಿ ನೀಡುತ್ತಿರುವ ಈ ಕಾರಣವನ್ನು ಒಪ್ಪಲಾಗದು. ಇದು ಕೃತಕವಾದದ್ದು ಎಂದು ಪೀಠ ತಿಳಿಸಿದೆ. ಜೊತೆಗೆ, ಒಮ್ಮೆ ಉದ್ಯೋಗಿ ಅಥವಾ ನೌಕರ ಗಳಿಕೆ ರಜೆ ಪಡೆಯಲು ಅರ್ಹನಾದರೆ ಆತ ಅದರ ನಗದೀಕರಣಕ್ಕೂ ಸಹಜವಾಗಿಯೇ ಅರ್ಹನಾಗಿರುತ್ತಾನೆ. ಇದು ಅವರ ಖಾತೆಗೆ ಸೇರ್ಪಡೆಗೊಂಡಿರಲಿದೆ. ಹೀಗಾಗಿ, ಇದರ ನಗದೀಕರಣ ಮಾಡಿಕೊಳ್ಳಲು ಅವರಿಗೆ ಅವಕಾಶವಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.