ಕಾಂತಾರ ಸಿನಿಮಾದ ಬಳಿಕ ನಟಿ ಸಪ್ತಮಿ ಗೌಡ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು ಇದೀಗ ಎರಡನೇ ಭಾರಿ ನಟ ಡಾಲಿ ಧನಂಜಯ್ ಗೆ ಜೋಡಿಯಾಗುತ್ತಿದ್ದಾರೆ.
ಈ ಹಿಂದೆ ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಧನಂಜಯ್ ಹಾಗೂ ಸಪ್ತಮಿ ಗೌಡ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾದ ಮೂಲಕವೆ ಸಪ್ತಮಿ ಗೌಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಮತ್ತೊಂದು ಡಾಲಿಗೆ ಜೋಡಿಯಾಗಿ ಸಪ್ತಮಿ ಕಾಣಿಸಿಕೊಳ್ತಿದ್ದಾರೆ.
ಸುಮಾರು ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಒಂದಾಗುತ್ತಿದ್ದಾರೆ. ‘ಹಲಗಲಿ’ ಹೆಸರಿನ ಸಿನಿಮಾದಲ್ಲಿ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸಿನಿಮಾದ ಕತೆ, ಪಾತ್ರವರ್ಗ ಅಂತಿಮವಾಗಿದ್ದು ಸಿನಿಮಾದ ಚಿತ್ರೀಕರಣವೂ ಪ್ರಾರಂಭವಾಗಿದೆ.
ಸ್ವಾತಂತ್ರ್ಯಕ್ಕೂ ಮುಂಚಿನ 1857 ರಲ್ಲಿ ನಡೆದ ಘಟನೆಯನ್ನು ಆಧರಿಸಿದ ಸಿನಿಮಾ ಒಂದರಲ್ಲಿ ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿದ್ದು, ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ದೇಶದಾದ್ಯಂತ ಹೊತ್ತಿದಾಗ ಬಾಗಲಕೋಟೆ ಜಿಲ್ಲೆ, ಮುಧೋಳದ ಹಲಗಲಿಯ ಬೇಡರು ಬ್ರಿಟೀಷರ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಹಲಗಲಿ ಬೇಡರ ಯುವಕನ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ತಿದ್ದಾರೆ.