ತುಮಕೂರು: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತಂತೆ ಶಾಸಕರು ಮತ್ತು ಕಾರ್ಯಕರ್ತರ ಮಟ್ಟದಲ್ಲಿ ಚರ್ಚೆ ನಡೆದಿದೆಯಾದರೂ ಸರಕಾರದ ಮಟ್ಟ ಹಾಗೂ ಪಕ್ಷದ ವೇದಿಕೆಯಲ್ಲಿ ಇನ್ನೂ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
‘ಬಡವರಿಗೆ ಮಾತ್ರವೇ ಗ್ಯಾರಂಟಿಗಳು ತಲುಪಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಸದ್ಯಕ್ಕೆ ಪರಿಷ್ಕರಣೆ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.13ರಷ್ಟು ಮತಗಳು ಹೆಚ್ಚಾಗಿವೆ. ಗ್ಯಾರಂಟಿ ಯೋಜನೆಗಳಿಂದಾಗಿಯೇ ಈ ಮತಗಳ ಪ್ರಮಾಣ ಹೆಚ್ಚಿದೆ ಎಂದು ಏಕೆ ಭಾವಿಸಬಾರದು? ಗ್ಯಾರಂಟಿಗಳ ಪರಿಷ್ಕರಣೆ ವಿಚಾರದಲ್ಲಿ ನನ್ನ ಅಭಿಪ್ರಾಯವೊಂದೇ ಮುಖ್ಯವಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದರೆ ಗೊಂದಲ ಉಂಟಾಗುತ್ತದೆ. ಅದಕ್ಕೆ ಅವಕಾಶ ಆಗಬಾರದು’ ಎಂದು ಹೇಳಿದರು.