ಬೆಂಗಳೂರು: ರಾಜಧಾನಿ ಬೆಂಗಳೂರಿನ ರೇವಾ ಕಾಲೇಜಿನ (Reva College, Bangalore)ಫೆಸ್ಟಿವಲ್ ವೇಳೆ ವಿದ್ಯಾರ್ಥಿಯನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಬಾಗಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾ ಗಿದ್ದಾರೆ. ಚಾಕು ಇರಿದಿದ್ದ ಅನಿಲ್ ಮತ್ತು ಗಲಾಟೆ ಮಾಡಿದ್ದ ಮತ್ತೊಬ್ಬ ಆರೋಪಿ ಶೃಂಗ ಎಂಬಾತನನ್ನು ಬಂಧಿಸಲಾಗಿದೆ. ಕಳೆದ 28ರಂದು ರೇವಾ ಕಾಲೇಜಿನಲ್ಲಿ(Reva College, Bangalore) ಎರಡು ದಿನಗಳ ರೇವೋತ್ಸವ ಹೆಸರಲ್ಲಿ ಕಾಲೇಜು ಫೆಸ್ಟ್ ಅನ್ನು ಆಯೋಜಿಸಲಾಗಿತ್ತು.
ಎಲ್ಲರೂ ಖುಷಿ ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾಗಲೇ, ಅಲ್ಲಿ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆ ನಡೆದು ನೆತ್ತರು ಹರಿದಿತ್ತು. ಗಲಾಟೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ಗುಜರಾತ್ ಮೂಲದ ವಿದ್ಯಾರ್ಥಿ ಭಾಸ್ಕರ್ ಜೆಟ್ಟಿ ಎಂಬಾತ ಹತ್ಯೆ ಆಗಿ ಹೋಗಿದ್ದ. ಪ್ರಕರಣ ಸಂಬಂಧ ಕಳೆದ ಭಾನುವಾರವೇ ಭರತೇಶ್ನನ್ನು ಬಂಧಿಸಲಾಗಿತ್ತು. ಕಾಲೇಜು ಕಾರ್ಯಕ್ರಮದಲ್ಲಿ ಆರೋಪಿ ಭರತೇಶ್ ಮತ್ತು ಮೃತ ಭಾಸ್ಕರ್ ಜೆಟ್ಟಿ ನಡುವೆ ಗಲಾಟೆ ನಡೆದಿತ್ತು.
ಆದರೆ ಗಲಾಟೆಗೂ ತನಗೂ ಸಂಬಂಧವಿಲ್ಲದಿದ್ದರೂ ಅನಿಲ್ ಜೋಶ್ನಲ್ಲಿ ಏಕಾಏಕಿ ನುಗ್ಗಿ ಡ್ರ್ಯಾಗರ್ನಿಂದ ಭಾಸ್ಕರ್ ಜೆಟ್ಟಿಯ ಎದೆಗೆ ಇರಿದು ಬಿಟ್ಟಿದ್ದ. ತೀವ್ರ ರಕ್ತಸ್ರಾವವಾಗಿ ಭಾಸ್ಕರ್ ಕುಸಿದು ಬೀಳುತ್ತಿದ್ದಂತೆ, ಅಲ್ಲಿಂದ ಕಾರಲ್ಲಿ ಮೂಡಿಗೆರೆಗೆ ಎಸ್ಕೇಪ್ ಆಗಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳ ಸ್ನೇಹಿತನ ಫೋನ್ ಜಾಡು ಹಿಂದೆ ಬಿದ್ದ ಬಾಗಲೂರು ಪೊಲೀಸರು, ಮೂಡಿಗೆರೆಯ ಅರಣ್ಯದ ತಗ್ಗು ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಅನಿಲ್ನನ್ನು ಬಂಧಿಸಿಲಾಗಿದೆ. ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದ ಆರೋಪಿ ಅನಿಲ್ ಸೇರಿ ಗಲಾಟೆಯಲ್ಲಿ ಭಾಗಿಯಾಗಿದ್ದ ಶೃಂಗ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.