ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24 ರಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದು, 1,450 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಪ್ರಧಾನಿ ಮೋದಿ ಅವರು ಮಾರ್ಚ್ 24 ರಂದು ಕಾಶಿಯಲ್ಲಿ ದೇಶದ ಮೊದಲ ನಗರ ಸಾರಿಗೆ ರೋಪ್ವೇಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಕ್ಷೇತ್ರಕ್ಕೆ ಒಂದು ದಿನದ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಕಾಶಿಯ ಜನರಿಗಾಗಿ 1,450 ಕೋಟಿ ರೂ.ಗಳ 25 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು 200 ಕೋಟಿ ರೂಪಾಯಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಾರಣಾಸಿಯ ಡಿವಿಜನಲ್ ಕಮಿಷನರ್ ಕೌಶಲ್ ರಾಜ್ ಶರ್ಮಾ ಅವರು ತಿಳಿಸಿದ್ದಾರೆ.
664.49 ಕೋಟಿ ರೂ. ವೆಚ್ಚದಲ್ಲಿ ದೇಶದ ಮೊದಲ ನಗರ ಸಾರಿಗೆ ರೋಪ್ವೇ ನಿರ್ಮಿಸಲಾಗುತ್ತಿದ್ದು, ಈ ರೋಪ್ವೇ ಐದು ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ. ಈ ಯೋಜನೆ ಪೂರ್ಣಗೊಂಡರೆ, ಕ್ಯಾಂಟ್ನಿಂದ ಗುಡೌಲಿಯಾವರೆಗಿನ ದೂರವನ್ನು ಕೇವಲ 16 ನಿಮಿಷಗಳಲ್ಲಿ ಕ್ರಮಿಸಬಹುದು. ಅದು ಪ್ರಸ್ತುತ ಕನಿಷ್ಠ 45 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.