ಹೊಸದಿಲ್ಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್, 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಿಂದ ಹೊರಗುಳಿದಿದ್ದಾರೆ. ಇದೀಗ ಮುಂಬರುವ ಏಷ್ಯಾ ಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳಿಂದಲೂ ಹೊರಗುಳಿಯಲಿದ್ದಾರೆಂದು ವರದಿಯಾಗಿದೆ.
ಕ್ರಿಕ್ಬಜ್ ಮೂಲಗಳ ಪ್ರಕಾರ ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಅವರಿಗೆ ಆಗಿರುವ ಗಾಯಗಳಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಕ್ರಿಕೆಟ್ ಅಂಗಣಕ್ಕೆ ಮರಳಲು ಇನ್ನೂ 7 ರಿಂದ 8 ತಿಂಗಳು ಬೇಕಾಗಬಹುದು ಎಂದು ಕ್ರಿಕ್ಬಜ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ 2024ರ ಜನವರಿ ಮೇಲೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ ಸಾಧ್ಯತೆ ಇದೆ.
ರಿಷಭ್ ಪಂತ್ ಸದ್ಯ ಊರುಗೋಲು ಸಹಾಯದಿಂದ ನಡೆಯುತ್ತಿದ್ದಾರೆ ಹಾಗೂ ತಮಗಾಗಿರುವ ಗಾಯಗಳಿಂದ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಕೆಲವೇ ವಾರಗಳಲ್ಲಿ ಊರುಗೋಲು ನೆರವಿಲ್ಲದ ನಡೆಯಲಿದ್ದಾರೆ. ಇತ್ತೀಚೆಗೆ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ವೀಕ್ಷಿಸಲು ಅರುಣ್ ಜೇಟ್ಲಿ ಅಂಗಣಕ್ಕೆ ಊರುಗೋಲು ಸಹಾಯದಿಂದ ಪಂತ್ ಬಂದಿದ್ದರು.
ಮತ್ತೊಂದೆಡೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದ ವೇಳೆಯೂ ರಿಷಭ್ ಪಂತ್ ಕಾಣಿಸಿಕೊಂಡಿದ್ದರು. ಆದರೆ, ಈ ಎರಡೂ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ಪಡೆ ಸೋಲು ಅನುಭವಿಸಿತ್ತು.
2022 ಡಿಸೆಂಬರ್ 30 ರಂದು ಮುಂಜಾನೆ ದಿಲ್ಲಿಯಿಂದ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಷಭ್ ಪಂತ್ ಚಲಾಯಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಆದರೆ, ರಿಷಭ್ ಪಂತ್ ಅವರನ್ನು ಸ್ಥಳೀಯರು ಪ್ರಾಣಾಪಾಯದಿಂದ ಪಾರು ಮಾಡಿ ಹಾಗೂ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿದ್ದರು.
ಕಾರು ಅಪಘಾತದ ಒಂದು ವಾರದ ಹಿಂದಷ್ಟೇ ಬಾಂಗ್ಲಾದೇಶ ವಿರುದ್ದ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 93 ರನ್ ಸಿಡಿಸಿದ್ದರು. ಆ ಮೂಲಕ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ನೆರವಾಗಿದ್ದರು. ಆದರೆ, ಸ್ಟಾರ್ ಆಟಗಾರನ ಅನುಪಸ್ಥಿತಿಯಲ್ಲಿ ಭಾರತ ತಂಡ, ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಕೆ.ಎಸ್ ಭರತ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಇನ್ನು ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್ ಹಾಗೂ 2023ರ ಏಕದಿನ ಟೂರ್ನಿಗಳಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಅವರಲ್ಲಿ ಒಬ್ಬರು ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಬಹುದು. ಏಷ್ಯಾ ಕಪ್ ಟೂರ್ನಿಯು ಸೆಪ್ಟಂಬರ್ 2 ರಿಂದ ಆರಂಭವಾಗಲಿದ್ದು, 17 ರಂದು ಅಂತ್ಯವಾಗಿದೆ. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 10 ರಂದು ಆರಂಭವಾಗಲಿದ್ದು, ನವೆಂಬರ್ 26 ರಂದು ಫೈನಲ್ ಪಂದ್ಯದ ಮೂಲಕ ಅಂತ್ಯವಾಗಲಿದೆ