ಕಾಂತಾರಾ, ಕೆಜಿಎಫ್ ನಂತಹ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ದೊಡ್ಟ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ. ಇದೀಗ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಂತಾರ ಸಿನಿಮಾದ ನಟನೆಗೆ ನಟ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಿದರು.
ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ನ್ಯಾಷನಲ್ ಅವಾರ್ಡ್ ಸ್ವೀಕರಿಸಿದಕ್ಕೆ ನಟ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ‘ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ದಕ್ಕಿದ್ದು, ಚಿತ್ರದ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.
ಕಳೆದ ಆಗಸ್ಟ್ 16ರಂದು 2022ನೇ ಸಾಲಿನ ಚಲನಚಿತ್ರಗಳಿಗೆ ಕೇಂದ್ರದ ವಾರ್ತಾ, ಪ್ರಸಾರ ಇಲಾಖೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಣೆ ಮಾಡಿತ್ತು. 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಕಾಂತಾರ ಹಾಗೂ ಕೆಜಿಎಫ್ ಚಿತ್ರ ಆಯ್ಕೆ ಆಗಿತ್ತು. ರಿಷಬ್ ಶೆಟ್ಟಿ ಅವರಿಗೆ ಮಲಯಾಳಂ ನಟ ಮಮ್ಮುಟಿ ಅವರು ಪೈಪೋಟಿ ನೀಡಿದ್ದರೂ ಅಂತಿಮವಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇನ್ನು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಿತ್ಯಾ ಮೆನನ್ ಪಡೆದುಕೊಂಡಿದ್ದಾರೆ.