ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸುಧಾಮೂರ್ತಿ ಅವರಿಗೆ ನೀಡಿ ಗೌರವಿಸಲಾಗಿದೆ. ಏ.5ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಹಸ್ತಾಂತರಿಸಲಾಗಿದ್ದು, ಈ ಬಗ್ಗೆ ಬ್ರಿಟನ್ ಪ್ರಧಾನಿ ಹಾಗೂ ಸುಧಾ ಮೂರ್ತಿ ಮಗಳ ಗಂಡ ರಿಷಿ ಸುನಕ್ ತಮ್ಮ ಅತ್ತೆಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದಕ್ಕೆ ಹರ್ಷ ವ್ಯಕ್ತಪಡಿಸಿದರು.
ಇದು ಹೆಮ್ಮೆಯ ದಿನವೆಂದು ರಿಷಿ ಸುನಕ್ ಹೇಳಿದ್ದು, ಇದನ್ನು ಅಕ್ಷತಾ ಮೂರ್ತಿ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. 72 ವರ್ಷದ ಸುಧಾ ಮೂರ್ತಿ ಅವರು ಸಮಾಜ ಸೇವೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದ ಜನಪ್ರಿಯ ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ, ಇನ್ಫೋಸಿಸ್ನ ಸಹ-ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನನ್ನ ಅಮ್ಮ ಈ ಸಮಾಜಕ್ಕೆ ಮಾಡಿದ ಕೆಲಸಕ್ಕೆ ಇದು ದೊಡ್ಡ ಗೌರವ, ಅವರು ಮಾಡಿದ ಕೆಲಸದ ಬಗ್ಗೆ ಅವರಿಗೆ ಇಂದು ತೃಪ್ತಿ ತಂದಿರಬಹುದು. ನಮಗೆಲ್ಲ ಅವರು ದೊಡ್ಡ ಸ್ಫೂರ್ತಿ. 25 ವರ್ಷಗಳ ಕಾಲ ಪರೋಪಕಾರಿ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಬಡಕುಟುಂಬಗಳಿಗೆ ಸೇವೆ ನೀಡಿದ್ದಾರೆ. ಹಲವಾರು ಸಾಕ್ಷರತಾ ಕೆಲಸಗಳಿಗೆ ಧನಸಹಾಯ, ನೈಸರ್ಗಿಕ ವಿಕೋಪಗಳಿಂದ ಜೀವನ ಕಳೆದುಕೊಂಡ ಜನರಿಗೆ ಅಗತ್ಯ ಸಹಾಯ, ದೇಶದ ಅನೇಕ ಕಡೆಗಳಲ್ಲಿ ಸುತ್ತಿ, ಬೇರೆ ಬೇರೆ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನುವುದೇ ದೊಡ್ಡ ಹೆಮ್ಮೆ ಎಂದು ಹೇಳಿದ್ದಾರೆ. ತನ್ನ ತಾಯಿ ಹೆಸರು ಗಳಿಸಲು ಬದುಕುವುದಿಲ್ಲ, ನನ್ನ ಪೋಷಕರು ನನ್ನ ಸಹೋದರ, ನನ್ನಲ್ಲಿ ತುಂಬಿದ ಮೌಲ್ಯಗಳು, ಕಠಿಣ ಪರಿಶ್ರಮ, ನಮ್ರತೆ, ನಿಸ್ವಾರ್ಥತೆ ಅದು ಯಾವತ್ತೂ ನನ್ನ ಎಲ್ಲ ಕೆಲಸದಲ್ಲೂ ಇರುತ್ತದೆ ಎಂದು ಅಕ್ಷತಾ ಮೂರ್ತಿ ಬರೆದುಕೊಂಡಿದ್ದಾರೆ.