ಬೆಂಗಳೂರು:- ರಸ್ತೆ ಗುಂಡಿ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮಾಡಿದ ಟ್ವೀಟ್ ಗೆ ಇದೀಗ ಸ್ಪಂದನೆ ಸಿಕ್ಕಿದೆ. ಸಚಿವರ ಟ್ವೀಟ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಂದಿಸಿದೆ.
ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ವೀರಣ್ಣಪಾಳ್ಯದಿಂದ ಹೆಬ್ಬಾಳ ವೃತ್ತದ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ರವಿವಾರ 18 ರಿಂದ ಬುಧವಾರ 21ರವರೆಗೆ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಲಿದೆ. ಹೀಗಾಗಿ ರಾತ್ರಿ 10.00 ಗಂಟೆಯಿಂದ ಮುಂಜಾನೆ 06.00 ಗಂಟೆಯ ವರೆಗೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗ ಸೂಚಿಸಲಾಗಿದೆ.
ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳದ ಕಡೆಗೆ ಸಂಚರಿಸುವ ವಾಹನ ಸವಾರರು ಹೊರ ವರ್ತುಲ ರಸ್ತೆಯ ಮುಖ್ಯ ಪಥವನ್ನೇ ಪರ್ಯಾಯ ರಸ್ತೆಯನ್ನಾಗಿ ಬಳಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸ್ ಸೂಚಿಸಿದೆ.
ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಅಥವಾ ಬಿಎಂಆರ್ಸಿಎಲ್ ಎಂಡಿ ಯಾರಾದರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಕೃಷ್ಣಭೈರೇಗೌಡ ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು.