ಮಾಸ್ಕೋ: 2022ರ ಫೆಬ್ರವರಿ 24ರಂದು ಆರಂಭವಾದ ರಷ್ಯಾ-ಉಕ್ರೇನ್ ಯುದ್ಧ (Russia Ukraine War) ಸದ್ದು ಮಾಡುತ್ತಲೇ ಇದೆ. ಯುದ್ಧ ಆರಂಭವಾಗಿ ವರ್ಷ ಕಳೆದರೂ, ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡರೂ, ವಿಶ್ವದ ಅನೇಕ ರಾಷ್ಟ್ರಗಳು ಶಾಂತಿ ಕಾಪಾಡುವಂತೆ ಸಲಹೆ ನೀಡಿದರೂ ಡೋಂಟ್ಕೇರ್ ಎನ್ನುವಂತೆ ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನ ಮುಂದುವರಿಸಿದೆ.
ರಷ್ಯಾ ಸೇನೆಯು ಉಕ್ರೇನ್ನ ಖಾರ್ಕೀವ್ ಪೂರ್ವ ಪ್ರದೇಶದ ದಿನಸಿ ಅಂಗಡಿ ಹಾಗೂ ಕೆಫೆಯೊಂದರ ಮೇಲೆ ದಾಳಿ (Russian Rocket Strike) ನಡೆಸಿದ್ದು, ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಗ್ರೋಜಾ ಗ್ರಾಮದಲ್ಲಿ ಮಧ್ಯಾಹ್ನ 1:15ರ (ಭಾರತೀಯ ಕಾಲಮಾನ) ವೇಳೆಗೆ ದಾಳಿ ನಡೆದಿರುವುದಾಗಿ ಖಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ತಿಳಿಸಿದ್ದಾರೆ.
ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodimir Zelensky) ಸ್ಥಳಕ್ಕೆ ಧಾವಿಸಿದ್ದಾರೆ. ಕಳೆದ ವರ್ಷ ಉಕ್ರೇನ್ ವಶಪಡಿಸಿಕೊಂಡಿದ್ದ ಕಾರ್ಕೀವ್ ಪ್ರದೇಶಗಳನ್ನು ಮರಳಿ ಪಡೆದುಕೊಳ್ಳಲು ಉಕ್ರೇನ್ ಕಸರತ್ತು ನಡೆಸುತ್ತಿದೆ. ಆದ್ರೆ ಇದಕ್ಕೆ ಆಸ್ಪದ ನೀಡದ ರಷ್ಯಾ ಉಕ್ರೇನಿನ ಮೇಲೆ ಭೀಕರ ದಾಳಿ ನಡೆಸುತ್ತಲೇ ಇದೆ, ಅಲ್ಲಿನ ಮೂಲ ಸೌಕರ್ಯಗಳನ್ನು ನಾಶಪಡಿಸುತ್ತಿದೆ.