ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅನುಮಾನ ಎನ್ನಲಾಗಿದೆ.ಸರಣಿ ಆರಂಭವಾಗುವ ಮುನ್ನವೇ ಭಾರತ ತಂಡದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ಈ ಸರಣಿಯ ಮೊದಲ ಅಥವಾ ಎರಡನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರಗುಳಿಯಬಹುದು ಎಂದು ವರದಿಯಾಗಿದೆ.
ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರೋಹಿತ್ ಬಿಸಿಸಿಐಗೆ ಈ ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಬಹುಶಃ ಈ ಕಾರಣದಿಂದ ರೋಹಿತ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ ಮುಗಿದ ಕೂಡಲೇ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಅಕ್ಟೋಬರ್ 16 ರಿಂದ ಈ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇದರಲ್ಲಿ 3 ಪಂದ್ಯಗಳು ನಡೆಯಲಿವೆ. ಆ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭವಾಗಲಿದೆ. ಭಾರತ ತಂಡ ಕಳೆದ ಎರಡು ಆವೃತ್ತಿಗಳಲ್ಲೂ ಆಸ್ಟ್ರೇಲಿಯಾವನ್ನು ಮಣಿಸಿದೆ. ಈ ಬಾರಿ ಸರಣಿಯಲ್ಲಿ 4ರ ಬದಲಿಗೆ 5 ಟೆಸ್ಟ್ ಪಂದ್ಯಗಳು ನಡೆಯಬೇಕಿದ್ದು, ಈ ಪಂದ್ಯಗಳಲ್ಲಿ ಒಂದರಲ್ಲಿ ಟೀಂ ಇಂಡಿಯಾ ತನ್ನ ಸ್ಟಾರ್ ಕ್ಯಾಪ್ಟನ್ ಇಲ್ಲದೆ ಆಡಬೇಕಾಗಬಹುದು.
ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಬಗ್ಗೆ ರೋಹಿತ್ ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸರಣಿಯ ಮೊದಲ ಪಂದ್ಯ ನವೆಂಬರ್ 22 ರಿಂದ ಪರ್ತ್ನಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಡಿಸೆಂಬರ್ 6 ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಮೊದಲ ಅಥವಾ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದು. ವರದಿಯ ಪ್ರಕಾರ ರೋಹಿತ್ ತುರ್ತು ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆದರೆ, ಈ ವೈಯಕ್ತಿಕ ವಿಚಾರ ಟೆಸ್ಟ್ ಸರಣಿಗೂ ಮುನ್ನವೇ ಬಗೆಹರಿದರೆ, ಆಗ ರೋಹಿತ್ ಎಲ್ಲಾ 5 ಟೆಸ್ಟ್ ಪಂದ್ಯಗಳನ್ನು ಆಡಬಹುದು ಎಂದೂ ಹೇಳಲಾಗಿದೆ.