ಆಸ್ಟ್ರೇಲಿಯಾ ಎದುರು ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಪೈಪೋಟಿ ನಡೆಸಲು ಟೀಮ್ ಇಂಡಿಯಾ ಸಜ್ಜಾಗಿದ್ದು, ಈ ಹೈ ವೋಲ್ಟೇಜ್ ಪಂದ್ಯ ಜೂನ್ 7ರಿಂದ 11ರವರೆಗೆ ಲಂಡನ್ನ ಕೆನಿಂಗ್ಟನ್ನಲ್ಲಿರುವ ದಿ ಓವಲ್ ಕ್ರೀಡಾಂಗಣದಲ್ಲಿ ಜರುಗಲಿದೆ. ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕಿದೆ. ಆದರೆ, ಎಡಗೈ ಹೆಬ್ಬೆರಳಿನ ಗಾಯದ ಸಮಸ್ಯೆ ಇದೀಗ ಆತಂಕ ತಂದೊಡ್ಡಿದೆ.
ನೆಟ್ಸ್ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಇದರ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿದೆ. ಅಂದಹಾಗೆ ಪ್ರಮುಖ ಟೆಸ್ಟ್ ಸರಣಿಗಳಿಗೂ ಮುನ್ನ ರೋಹಿತ್ ಶರ್ಮಾ ಗಾಯಗೊಂಡಿರುವುದು ಇದು ಮೊದಲೇನಲ್ಲ. ಹೀಗಾಗಿ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಮುನ್ನ ಹೀಗಾಗದೇ ಇರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಟ್ರೋಫಿಗೆಳ ಬರ ಎದುರಿಸಿರುವ ಭಾರತ ತಂಡ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಟೂರ್ನಿ ಗೆದ್ದು 10 ವರ್ಷಗಳೇ ಕಳೆದಿದೆ. 2013ರಲ್ಲಿ ಎಂಎಸ್ ಧೋನಿ ಸಾರಥ್ಯದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ತಂಡ, ಬಳಿಕ ಹಲವು ಬಾರಿ ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಫೈನಲ್ ತಲುಪಿದೆಯಾದರೂ ಟ್ರೋಫಿ ಗೆಲುವು ಸಾಧ್ಯವಾಗಿಲ್ಲ. ಇದೀಗ ಎರಡನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸದ್ದಡಗಿಸಿ ಟ್ರೋಫಿ ಗೆದ್ದು ಬೀಗುವ ಲೆಕ್ಕಾಚಾರದಲ್ಲಿದೆ.
ಗಾಯದ ಸಮಸ್ಯೆ ಗಂಭೀರವಾದಂತ್ತಿಲ್ಲ
ಐಪಿಎಲ್ 2023 ಟೂರ್ನಿಯಲ್ಲೂ ಫೀಲ್ಡಿಂಗ್ ವೇಳೆ ರೋಹಿತ್ ಶರ್ಮಾ ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆದರೂ ಟೂರ್ನಿಯ ಬಹುತೇಕ ಎಲ್ಲ ಪಂದ್ಯಗಳಲ್ಲಿ ಆಡಿದ್ದರು. ಇದೀಗ ಹೆಬ್ಬೆರಳಿನ ಗಾಯದ ಸಮಸ್ಯೆಗೆ ರೋಹಿತ್ ಬ್ಯಾಂಡೇಜ್ ತೊಟ್ಟಿದ್ದರಾದರೂ ಪಂದ್ಯದಿಂದ ಹೊರಗುಳಿಯುವಷ್ಟು ಗಂಭೀರ ಗಾಯವೇನೂ ಅಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ನೆಟ್ಸ್ ಅಭ್ಯಾಸ ವೇಳೆ ಅವರಿ ಎಡ ಹೆಬ್ಬೆರಳಿಗೆ ಚೆಂಡು ಬಲವಾಗಿ ಬಡಿದಿದೆ. ಬಳಿಕ ರೋಹಿತ್ ಕೊಂಚ ಸಮಯ ತೆಗೆದುಕೊಂಡು ಚೇತರಿಸಿದ್ದಾರೆ ಎಂದು ಕ್ರಿಕೆಟ್ ನೆಕ್ಸ್ಟ್ ವರದಿ ಮಾಡಿದೆ.