ಬೆಂಗಳೂರು: ಸನ್ರೈಸರ್ಸ್ ಹೈದರಾಬಾದ್ ಎದುರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ದಾಖಲಿಸಿದರೂ, ಡ್ರೆಸಿಂಗ್ ರೂಮ್ನಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಐಪಿಎಲ್ 2024 ಟೂರ್ನಿ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ಕಳೆದುಕೊಂಡ ರೋಹಿತ್ ಶರ್ಮಾ ಈ ಬಾರಿ ಆರಂಭಿಕ ಬ್ಯಾಟರ್ ಆಗಿ ಮಾತ್ರವೇ ತಂಡದ ಸೇವೆಯಲ್ಲಿದ್ದಾರೆ. ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಮನಮೋಹಕ ಶತಕ ಬಾರಿಸಿದರೂ, ನಂತರದ ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಆಡಲು ಸಂಪೂರ್ಣ ವಿಫಲರಾದರು. ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ಎದುರಿದ 5 ಎಸೆತಗಳಲ್ಲಿ 4 ರನ್ ಗಳಿಸಿ ವೇಗಿ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಬಳಿಕ ರೋಹಿತ್ ಶರ್ಮಾ ಡ್ರೆಸಿಂಗ್ ರೂಮ್ನಲ್ಲಿ ಒಬ್ಬರೇ ಕುಳಿತು ಕಣ್ಣೀರಿಟ್ಟಿರುವುದು ಇದೀಗ ವಿಡಿಯೋ ಮೂಲಕ ಬೆಳಕಿಗೆ ಬಂದಿದೆ. ಪ್ರಸಕ್ತ ಟೂರ್ನಿಯ ಮೊದಲ 7 ಇನಿಂಗ್ಸ್ಗಳಲ್ಲಿ ರೋಹಿತ್ 297 ರನ್ಗಳನ್ನು ಬಾರಿಸಿದ್ದರು. ಆದರೆ ನಂತರದ ಇನಿಂಗ್ಸ್ಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಸಿಎಸ್ಕೆ ಎದುರು 105* ರನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎದುರು 49 ರನ್ ಅವರ ಬೆಸ್ಟ್ ಬ್ಯಾಟಿಂಗ್ ಪ್ರದರ್ಶನ. ಕೊನೆಯ 5 ಪಂದ್ಯಗಳಲ್ಲಿ ಅವರು ಗಳಿಸಿರುವುದು ಕೇವಲ 34 ರನ್ ಮಾತ್ರ. ಹೀಗಾಗಿ ಸತತ ವೈಫಲ್ಯ ಹಿಟ್ಮ್ಯಾನ್ ನೋವಿಗೆ ಕಾರಣವಾಗಿದೆ.
ಎಸ್ಆರ್ಎಚ್ ನಾಯಕ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್ ಎದುರು ಪುಲ್ ಶಾಟ್ ಹೊಡೆಯುವ ಪ್ರಯತ್ನದಲ್ಲಿ ಚೆಂಡನ್ನು ಗಾಳಿಗೆ ಹೊಡೆದರು. ಟಾಪ್ ಎಡ್ಜ್ ಆಗಿದ್ದ ಚೆಂಡನ್ನು ಎಸ್ಆರ್ಎಚ್ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ ಸುಲಭವಾಗಿ ಹಿಡಿದುಕೊಂಡರು. ಬೇಸರದಿಂದಲೇ ಪೆವಿಲಿಯನ್ ಸೇರಿದ ರೋಹಿತ್ ಕೆಲಸ ಒಬ್ಬರೇ ಕುಳಿತು. ಕ್ಯಾಮೆರಾ ಕಣ್ಣುಗಳಲ್ಲಿ ರೋಹಿತ್ ಕಣ್ಣೀರಿಡುತ್ತಿರುವುದು ಬೆಳಕಿಗೆ ಬಂದಿತು.
ಮೇ 26ರಂದು ಐಪಿಎಲ್ 2024 ಟೂರ್ನಿ ಮುಗಿಯಲಿದ್ದು, ಜೂನ್ 1ರಿಂದ 29ರವರೆಗೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಜೂನ್ 5ರಂದು ಐರ್ಲೆಂಡ್ ಎದುರು ಸ್ಪರ್ಧಿಸುವ ಮೂಲಕ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ರೋಹಿತ್ ಶರ್ಮಾ ಅವರ ಕಳಪೆ ಲಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಆತಂಕ ಮೂಡಿಸಿದೆ.