ಲಂಡನ್: ಆಸ್ಟ್ರೇಲಿಯಾ ವಿರುದ್ಧ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಬೇಜವಾಬ್ದಾರಿಯುತವಾಗಿ ವಿಕೆಟ್ ಒಪ್ಪಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿರುದ್ಧ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಡಬ್ಲ್ಯುಟಿಸಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ಪ್ರಥಮ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 469 ರನ್ಗಳಿಗೆ ಆಲೌಟ್ ಆಗಿದ್ದರೆ, ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. ಸದ್ಯ ಭಾರತ 318 ರನ್ಗಳ ಹಿನ್ನಡೆಯಲ್ಲಿದ್ದು, ಕೈಯಲ್ಲಿ ಕೇವಲ ಐದು ವಿಕೆಟ್ಗಳಿವೆ.
ಈ ಟೆಸ್ಟ್ ಪಂದ್ಯದಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳಬೇಕೆಂದರೆ ಭಾರತ ತಂಡದ ಆಟಗಾರರು ಅಸಾಧಾರಣ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಏಕೆಂದರೆ ಶುಭಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಅವರು ಪ್ರಥಮ ಇನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಮೂರನೇ ದಿನವಾದ ಶುಕ್ರವಾರ ಅಜಿಂಕ್ಯ ರಹಾನೆ (29*) ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷೆ ಇದೆ.
ಮೂರನೇ ದಿನದಾಟದ ಅಂತ್ಯಕ್ಕೆ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, “ಶುಭಮನ್ ಗಿಲ್ ಸೇರಿದಂತೆ ಭಾರತ ತಂಡದಿಂದ ಎರಡು ತಪ್ಪು ನಿರ್ಣಯಗಳು ಸಂಭವಿಸಿವೆ. ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್ನಲ್ಲಿದ್ದ ಗಿಲ್ ವಿಕೆಟ್ ಭಾರತಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಮತ್ತೊಂದೆಡೆ ಐಪಿಎಲ್ನಿಂದಲೂ ರೋಹಿತ್ ಶರ್ಮಾ ಉತ್ತಮ ಫಾರ್ಮ್ನಲ್ಲಿಲ್ಲ. ಹಾಗಾಗಿ ಅಕ್ರಾಸ್ ದಿ ಲೈನ್ ಅವರು ಆಡಬಾರದಿತ್ತು. ಮತ್ತೊಮ್ಮೆ ಚೇತೇಶ್ವರ್ ಪೂಜಾರ ಆಫ್ ಸ್ಟಂಪ್ ಕವರ್ ಮಾಡಿಕೊಳ್ಳದೆ ತಪ್ಪು ಮಾಡಿದರು. ಈ ಮೂರು ಔಟ್ಗಳನ್ನು ತಪ್ಪಿಸಬಹುದಿತ್ತು,” ಎಂದು ಹೇಳಿದ್ದಾರೆ.
“ಆದರೆ, ಇದರ ಶ್ರೇಯ ಆಸ್ಟ್ರೇಲಿಯಾ ಬೌಲರ್ಗಳಿಗೆ ಸಲ್ಲಬೇಕು. ಅವರು ಸಂಪೂರ್ಣವಾಗಿ ಫುಲ್ ಲೆನ್ತ್ಗಳನ್ನು ಆಡಿಸಿದ್ದಾರೆ. ಆ ಮೂಲಕ ಬ್ಯಾಟ್ಸ್ಮನ್ಗಳನ್ನು ಚಿಂತೆಗೀಡು ಮಾಡಿದ್ದರು. ಈ ರೀತಿ ಫುಲ್ ಲೆನ್ತ್ ಹಾಕಿದಾಗ ಆಫ್ ಸ್ಟಂಪ್ನಲ್ಲಿ ನೀವು ಎಷ್ಟೇ ಶಕ್ತಿಯುತವಾಗಿದ್ದರೂ ಕೆಲ ಗೊಂದಲ ಉಂಟಾಗುವುದು ಸಹಜ,” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.