ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಹಲವು ದಾಖಲೆ ಬರೆದಿದ್ದಾರೆ.
ಐರ್ಲೆಂಡ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಟೀಂ ಇಂಡಿಯಾ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ಐರ್ಲೆಂಡ್ ನೀಡಿದ 96 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಪಂದ್ಯದಲ್ಲಿ 37 ಎಸೆತಗಳನ್ನು ಎದುರಿಸಿದ ರೋಹಿತ್ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 52 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಇದರೊಂದಿಗೆ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು. ಅದರಲ್ಲಿ ಪ್ರಮುಖ 3 ದಾಖಲೆಗಳ ಪಟ್ಟಿ ಇಲ್ಲಿದೆ.
ತಂಡದ ಪರ 52 ರನ್ಗಳ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿರು. ಇದಕ್ಕೂ ಮುನ್ನ ಭಾರತದ ಆಟಗಾರ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನಿ ಆಟಗಾರ ಬಾಬರ್ ಆಝಂ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 4038 ರನ್ ಗಳಿಸಿದ್ದರೆ, ಬಾಬರ್ ಆಝಂ ಟಿ20ಯಲ್ಲಿ ಒಟ್ಟು 4023 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ತಮ್ಮ 152ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಅತಿ ಕಡಿಮೆ ಎಸೆತಗಳಲ್ಲಿ ಅಂದರೆ 2861 ಎಸೆತಗಳಲ್ಲಿ 4000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.
ರೋಹಿತ್ ಶರ್ಮಾ ಟಿ20 ವಿಶ್ವಕಪ್ನಲ್ಲಿ 1000 ರನ್ ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ. ಇದಕ್ಕೂ ಮುನ್ನ ಭಾರತದ ಆಟಗಾರ
ವಿರಾಟ್ ಕೊಹ್ಲಿ ಹಾಗೂ ಶ್ರೀಲಂಕಾ ಆಟಗಾರ ಮಹೇಲಾ ಜಯವರ್ಧನೆ ಈ ಸಾಧನೆ ಮಾಡಿದ್ದರು. ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 1142 ರನ್ ಗಳಿಸಿದ್ದರೆ, ಟಿ20 ವಿಶ್ವಕಪ್ನಲ್ಲಿ ಮಹೇಲಾ ಜಯವರ್ಧನೆ 1016 ರನ್ ಬಾರಿಸಿದ್ದಾರೆ.
ಪಂದ್ಯದಲ್ಲಿ ರೋಹಿತ್ ಶರ್ಮಾ ಮೂರು ಸಿಕ್ಸರ್ ಬಾರಿಸಿದರು. ಇದರೊಂದಿಗೆ ಅವರು 600 ಸಿಕ್ಸರ್ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.