ಬೆಂಗಳೂರು:ಮಾಜಿ ಸಚಿವ ಹಾಗೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಪ್ರಭಾವಿ ನಾಯಕರಾಗಿದ್ದ ರೋಷನ್ ಬೇಗ್ ಹಾಗೂ ಅವರ ಪುತ್ರ ರುಮಾನ್ ಬೇಗ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ. ಐಎಂಎ ಹಗರಣದ ಕಾರಣದಿಂದಾಗಿ ರಾಜಕೀಯ ಭವಿಷ್ಯದಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿರುವ ರೋಷನ್ ಬೇಗ್ ಇದೀಗ ಪುತ್ರನ ರಾಜಕೀಯ ಭವಿಷ್ಯದ ನಿಟ್ಟಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ರೋಷನ್ ಬೇಗ್ ಪುತ್ರ ಆರ್ ರುಮಾನ್ ಬೇಗ್ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಯುಗಾದಿ ಶುಭಾಶಯವನ್ನು ಕೋರಿದ್ದಾರೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಎಸ್ವೈ ಬಲವಾದ ಅಭಿಪ್ರಾಯವನ್ನು ಹೊಂದಿದ್ದಾರೆ’ ಎಂಬ ವಿಚಾರವನ್ನೂ ಉಲ್ಲೇಖಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ವಿರುದ್ಧ ರೋಷನ್ ಬೇಗ್ ವಾಗ್ದಾಳಿ ನಡೆಸಿದ್ದರು. ಈ ಸೋಲಿಗೆ ಇವರೇ ಕಾರಣವೆಂದು ಬೊಟ್ಟು ಮಾಡಿದ್ದರು. ಸಿದ್ದರಾಮಯ್ಯ ಅವರ ಉಡಾಫೆ ಹಾಗೂ ದಿನೇಶ್ ಗುಂಡೂರಾವ್ ಅವರ ಅಪ್ರಬುದ್ಧತೆಯೇ ಸೋಲಿಗೆ ಕಾರಣವೆಂದು ಆರೋಪಿಸಿದ್ದರು. ಜೊತೆಗೆ ಕೆಸಿ ವೇಣುಗೋಪಾಲ್ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಸುಪ್ರೀಂ ತೀರ್ಪಿನ ಬಳಿಕ ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೊಳ್ಳುವ ಪ್ರಯತ್ನ ನಡೆಸಿದ್ದರೂ, ಐಎಂಎ ಪ್ರಕರಣ ಅವರಿಗೆ ಮುಳುವಾಗಿ ಪರಿಣಮಿಸಿತ್ತು. ಶಿವಾಜಿನಗರ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿದ್ದ ರೋಷನ್ ಬೇಗ್ ಅವರು, ನಂತರದಲ್ಲಿ ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು.
ಪುತ್ರನರಾಜಕೀಯಭವಿಷ್ಯದನಿಟ್ಟಿನಲ್ಲಿನಿರ್ಧಾರ
ಈ ನಡುವೆ ರೋಷನ್ ಬೇಗ್ ಚುನಾವಣಾ ರಾಜಕೀಯದಿಂದ ದೂರವಾಗಿದ್ದಾರೆ. ಆದರೆ, ಅವರ ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಇದೀಗ ಬಿಜೆಪಿಯ ನಾಯಕರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಶಿವಾಜಿನಗರದಿಂದ ಪುತ್ರ ರುಮಾನ್ ಬೇಗ್ ಅವರನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ರುಮಾನ್ ವಿರುದ್ಧ ಯಾವುದೇ ಆರೋಪ ಇಲ್ಲದ ಕಾರಣದಿಂದಾಗಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲು ಯಾವುದೇ ಅಡ್ಡಿ ಆತಂಕ ಎದುರಾಗುವುದಿಲ್ಲ.
ಕರ್ನಾಟದಲ್ಲೂ ಒಂದು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಲ್ಲಿ ಅದು ಒಂದು ಸಂದೇಶ ನೀಡಲಿದೆ ಎಂಬ ಅಭಿಪ್ರಾಯಕ್ಕೆ ಬಿಜೆಪಿ ರಾಜ್ಯ ನಾಯಕರು ಬಂದರೆ ಇಂತಹ ಸಾಧ್ಯತೆಗಳು ದಟ್ಟವಾಗಿದೆ. ಆದರೆ ಐಎಂಎ ಹಗರಣ ಮತ್ತೆ ಮುನ್ನೆಲೆಗೆ ಬಂದು ವಿರೋಧ ವ್ಯಕ್ತವಾದಲ್ಲಿ ಇದು ತಿರುಗು ಬಾಣವಾಗುವ ಸಾಧ್ಯತೆ ಇದೆ.