ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಶವವಾಗಿ ಪತ್ತೆಯಾಗಿರೋ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವರಾಜ್ ಮೃತ ಪೊಲೀಸ್ ಕಾನ್ಸ್ಟೇಬಲ್. ಮೃತ ಕಾನ್ಸ್ಟೇಬಲ್ ಶಿವರಾಜ್ ಮಡಿವಾಳ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಶಿವರಾಜ್ ಮದುವೆಯಾಗಿದ್ದರು. ಮಡಿವಾಳ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಶಿವರಾಜ್ 26 ರಂದು ನಾಪತ್ತೆಯಾಗಿದ್ರು. ಆದರೆ ಇಂದು ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹೌದು, ಶಿವರಾಜ್ ಪಾಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವರಾಜ್ ನಾಪತ್ತೆ ಹಿನ್ನೆಲೆಯಲ್ಲಿ ಸಹೋದರ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಶಿವರಾಜ್ ಶವವಾಗಿ ಪತ್ತೆಯಾಗಿದ್ದನ್ನು ಕಂಡು ಶಾಕ್ ಆಗಿದ್ದಾರೆ.
ಕೌಟುಂಬಿಕ ಕಲಹ ಕಾರಣಕ್ಕೆ ಮನನೊಂದು ಶಿವರಾಜ್ ಆತ್ಮಹತ್ಯೆ ಮಾಡಿಕೊಂಡ್ರಾ ಎಂದು ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗುತ್ತಿವೆ. ಮೂರು ತಿಂಗಳ ಹಿಂದೆ ಶಿವರಾಜ್. ವಾಣಿ ಎಂಬಾಕೆಯನ್ನು ಮದುವೆಯಾಗಿದ್ದರು. ಮದುವೆಯಾದ ಬಳಿಕ ದಂಪತಿ ಕೌಟುಂಬಿಕ ಕಲಹದ ಹಿನ್ನೆಲೆ ದೂರವಾಗಿದ್ದರು. ಈ ಹಿಂದೆ ಪತ್ನಿ ವಾಣಿಯವರು ಪತಿ ಹಾಗೂ ಕುಟುಂಬದವರ ವಿರುದ್ಧ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿದ ಬಳಿಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ಈ ಬಗ್ಗೆ ಶಿವರಾಜ್ ಸಹೋದರನಿಂದ ಸುಬ್ರಮಣ್ಯಪುರ ಠಾಣೆಗೆ ದೂರು ದಾಖಲಾಗಿತ್ತು. ಕರ್ತವ್ಯಕ್ಕೆ ಹೊರಟ ಶಿವರಾಜ್ ನಾಪತ್ತೆ ಎಂದು ದೂರು ಸಹ ನೀಡಲಾಗಿತ್ತು. ಆದರೆ ಇದೀಗ ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಶವವಾಗಿ ಪತ್ತೆಯಾಗಿದ್ದಾರೆ.
ವರದಿಗಾರರು ರಂಗನಾಥ್ ಭಂಡಾರಿ