ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಕಾವು ಆರಂಭವಾಗುತ್ತಿದ್ದಂತೆ ರಾಜಕಾರಣದಲ್ಲಿ ಸಕ್ರಿಯನಾಗಲು ಸಜ್ಜಾಗುತ್ತಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು (Wilson Garden Naga) ಬೆಂಗಳೂರು ಪೊಲೀಸರು (Bengaluru Police) ಚುನಾವಣೆ ಮುಗಿಯುವವರೆಗೆ ಗಡಿಪಾರು ಮಾಡಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಣ ನಿಂಬರಗಿ ಗಡಿಪಾರು ನಿರ್ದೇಶನ ನೀಡಿದ್ದಾರೆ. ಚುನಾವಣೆಯ ನಂತರ ಪೊಲೀಸ್ ಮೇಲ್ವಿಚಾರಣೆಯೊಂದಿಗೆ ಮಾತ್ರ ಆತ ನಗರಕ್ಕೆ ಪ್ರವೇಶಿಸಬಹುದಾಗಿದೆ. ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ರೌಡಿಶೀಟರ್ಗಳಿಗೆ ಪೊಲೀಸರು ಎಚ್ಚರಿಕೆ ನೀಡಲು ಪ್ರಾರಂಭಿಸಿದ್ದಾರೆ. ಸಾಮಾನ್ಯ ಅಪರಾಧಿಗಳಿಂದ ಉತ್ತಮ ನಡವಳಿಕೆಗೆ ಭದ್ರತೆಯಾದ ಸಿಆರ್ಪಿಸಿ ಸೆಕ್ಷನ್ 110 ರ ಅಡಿಯಲ್ಲಿ ಬಾಂಡ್ಗಳಿಗೆ ಸಹಿ ಹಾಕುವಂತೆ ಮಾಡುತ್ತಿದ್ದಾರೆ.
ನಾಗರಾಜು ವಿರುದ್ಧ ದರೋಡೆ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳ ದೊಡ್ಡ ಪಟ್ಟಿಯೇ ಇದೆ. ಈತನ ವಿರುದ್ಧ ಸಿದ್ದರಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 392ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. 2005ರಲ್ಲಿ ಆರ್ಆರ್ ನಗರ, ಆಡುಗೋಡಿ, ಬನಶಂಕರಿ ಪೊಲೀಸರು ಸರಣಿ ವಾಹನ ಕಳವು ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದ್ದರು. 2009ರಲ್ಲಿ ಕಲಾಸಿಪಾಳ್ಯ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. 2012ರಲ್ಲಿ ಈತನ ವಿರುದ್ಧ ರೌಡಿಶೀಟರ್ ಗುಪ್ಪಾ ಕೊಲೆ ಪ್ರಕರಣ ದಾಖಲಾಗಿತ್ತು. ಈತನ ವಿರುದ್ಧ ಇದುವರೆಗೆ 22 ಪ್ರಕರಣಗಳು ದಾಖಲಾಗಿದ್ದು, ಏಳು ಕೊಲೆ ಪ್ರಕರಣಗಳಲ್ಲಿ ಎ1 ಆರೋಪಿಯಾಗಿದ್ದಾನೆ.