ಬೆಂಗಳೂರು: ಮ್ಯಾಕ್ಸ್ವೆಲ್, ನಾಯಕ ಡುಪ್ಲೆಸಿಸ್ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸೋತಿದೆ. ಕ್ಯಾಚ್ ಕೈ ಚೆಲ್ಲಿದ್ದರೂ ಕೊನೆಯಲ್ಲಿ ಬೌಲರ್ಗಳ ಉತ್ತಮ ಆಟದಿಂದ ಬೆಂಗಳೂರು ವಿರುದ್ಧ ಚೆನ್ನೈ 8 ರನ್ಗಳ ಜಯ ಸಾಧಿಸಿದೆ.
ಗೆಲ್ಲಲು 227 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಮ್ಯಾಕ್ಸ್ವೆಲ್ (Maxwell) ಮತ್ತು ಡುಪ್ಲೆಸಿಸ್ (F du Plessis) ಆಟದಿಂದಾಗಿ ಜಯದತ್ತ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಆರಂಭದಲ್ಲೇ ಕುಸಿತ:
ಮೊದಲ ಓವರ್ನಲ್ಲಿ 6 ರನ್ ಗಳಿಸಿದ್ದ ಕೊಹ್ಲಿ (Kohli) ಔಟಾದರು. ಬ್ಯಾಟ್ಗೆ ಬಡಿದ ಚೆಂಡು ಕಾಲಿಗೆ ಸಿಕ್ಕಿ ವಿಕೆಟಿಗೆ ಬಡಿಯಿತು. ನಂತರ ಬಂದ ಮಹಿಪಾಲ್ ಲೋಮ್ರೋರ್ ಸೊನ್ನೆ ಸುತ್ತಿದರು.
2 ಓವರ್ ಅಂತ್ಯಕ್ಕೆ 15 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್ಸಿಬಿಗೆ ನಾಯಕ ಡುಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಜೀವ ತುಂಬಿದರು. ಚೆನ್ನೈ ಬೌಲರ್ಗಳನ್ನು ಚೆಂಡಾಡಿದ ಇಬ್ಬರು ಮೂರನೇ ವಿಕೆಟಿಗೆ 61 ಎಸೆತಗಳಲ್ಲಿ 126 ರನ್ ಜೊತೆಯಾಟವಾಡಿದರು. ಮ್ಯಾಕ್ಸ್ವೆಲ್ 76 ರನ್ (36 ಎಸೆತ, 3 ಬೌಂಡರಿ, 8 ಸಿಕ್ಸರ್) ಡುಪ್ಲೆಸಿಸ್ 62 ರನ್(33 ಎಸೆತ, 5 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು.
ದಿನೇಶ್ ಕಾರ್ತಿಕ್ 28 ರನ್(14ಎಸೆತ, 3 ಬೌಂಡರಿ, 2 ಸಿಕ್ಸರ್), ಕೊನೆಯಲ್ಲಿ ಪ್ರಭುದೇಸಾಯಿ 19 ರನ್(11 ಎಸೆತ, 2 ಸಿಕ್ಸರ್) ಹೊಡೆದು ಔಟಾದರು. 16.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ಗಳಿಸಿದ್ದ ಬೆಂಗಳೂರು 27 ರನ್ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲನ್ನು ಒಪ್ಪಿಕೊಂಡಿತು
ಚೆನ್ನೈ ಸವಾಲಿನ ಮೊತ್ತ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ 16 ರನ್ ಗಳಿಸುವಷ್ಟರಲ್ಲೇ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಡೆವೊನ್ ಕಾನ್ವೇ ಮತ್ತು ಅಜಿಂಕ್ಯ ರಹಾನೆ 43 ಎಸೆತಗಳಲ್ಲಿ 74 ರನ್ ಜೊತೆಯಾಟವಾಡಿದರು. ರಹಾನೆ 37 ರನ್(20 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
3ನೇ ವಿಕೆಟಿಗೆ ಕಾನ್ವೇ ಮತ್ತು ಶಿವಂ ದುಬೆ 37 ಎಸೆತಗಳಲ್ಲಿ 80 ರನ್ ಚಚ್ಚಿದರು. ಶಿವಂ ದುಬೆ 52 ರನ್ (27 ಎಸೆತ, 2 ಬೌಂಡರಿ, 5 ಸಿಕ್ಸರ್), ಕಾನ್ವೇ 83 ರನ್(45 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು. ಅಂಬಾಟಿ ರಾಯಡು 14 ರನ್, ಮೊಯಿನ್ ಅಲಿ ಔಟಾಗದೇ 19 ರನ್( 9 ಎಸೆತ, 2 ಸಿಕ್ಸರ್) ಹೊಡೆದ ಪರಿಣಾಮ ಚೆನ್ನೈ 6 ವಿಕೆಟ್ ನಷ್ಟಕ್ಕೆ 226 ರನ್ ಹೊಡೆಯಿತು.
ರನ್ ಏರಿದ್ದು ಹೇಗೆ?
50 ರನ್ – 36 ಎಸೆತ
100 ರನ್ – 64 ಎಸೆತ
150 ರನ್ – 87 ಎಸೆತ
200 ರನ್ – 108 ಎಸೆತ
226 ರನ್ – 120 ಎಸೆತ