ಬೆಂಗಳೂರು: ಕಳಪೆ ಫೀಲ್ಡಿಂಗ್, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸೋಲನ್ನು ಅನುಭವಿಸಿದೆ. 21 ರನ್ಗಳಿಂದ ಗೆದ್ದ ಕೋಲ್ಕತ್ತಾ ಈ ಆವೃತ್ತಿಯಲ್ಲಿ ಮೂರನೇ ಜಯವನ್ನು ದಾಖಲಿಸಿತು.
ಗೆಲ್ಲಲು 201 ರನ್ಗಳ ಕಠಿಣ ಗುರಿಯನ್ನು ಪಡೆದ ಬೆಂಗಳೂರು ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಆವೃತ್ತಿಯಲ್ಲಿ ತಾನು ಆರ್ಸಿಬಿ ವಿರುದ್ಧ ಆಡಿದ ಎರಡು ಪಂದ್ಯಗಳನ್ನು ಕೋಲ್ಕತ್ತಾ ಗೆದ್ದಿರುವುದು ವಿಶೇಷ. ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ (Virat Kohli) ಮತ್ತು ಫಾಫ್ ಡು ಪ್ಲೆಸಿಸ್ ಆರಂಭದಿಂದಲೇ ಬೌಲರ್ಗಳನ್ನು ದಂಡಿಸಲು ಆರಂಭಿಸಿದರು. ಆದರೆ ಡುಪ್ಲೆಸಿಸ್ ಬಲವಾದ ಹೊಡೆತ ಹೊಡೆಯಲು ಹೋಗಿ 17 ರನ್(7 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ನಂತರ ಬಂದ ಶಾಬಾಜ್ ಅಹ್ಮದ್ 2 ರನ್, ಮ್ಯಾಕ್ಸ್ವೆಲ್ 5 ರನ್ ಗಳಿಸಿ ಔಟಾದರು.
ವಿಕೆಟ್ ಉರುಳುತ್ತಿದ್ದರೂ ಕೊಹ್ಲಿ ಮತ್ತು ಮಹಿಪಾಲ್ ಲೋಮ್ರೋರ್ 4ನೇ ವಿಕೆಟಿಗೆ 34 ಎಸೆತಗಳಲ್ಲಿ 55 ರನ್ ಜೊತೆಯಾಟವಾಡಿದರು. ಕೊಹ್ಲಿ ಲೋಮ್ರೋರ್ 34 ರನ್(18 ಎಸೆತ, 1 ಬೌಂಡರಿ, 3 ಸಿಕ್ಸರ್), ಕೊಹ್ಲಿ54 ರನ್(37 ಎಸೆತ, 6 ಬೌಂಡರಿ) ಹೊಡೆದು ವೆಂಕಟೇಶ್ ಅಯ್ಯರ್ ಬೌಂಡರಿ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್ಗೆ ಔಟಾದರು. ದಿನೇಶ್ ಕಾರ್ತಿಕ್ 22 ರನ್ಗಳಿಸಿ ಕ್ಯಾಚ್ ನೀಡಿ ಹೊರ ನಡೆದರು.ವರುಣ್ ಚಕ್ರವರ್ತಿ 27 ರನ್ ನೀಡಿ 3 ವಿಕೆಟ್ ಪಡೆದರೆ, ಸುಯೇಶ್ ಶರ್ಮಾ ಮತ್ತು ಅಂಡ್ರೆ ರಸಲ್ ತಲಾ 2 ವಿಕೆಟ್ ಪಡೆದರು. ಬೌಲಿಂಗ್ ನಿಯಂತ್ರಣದ ಜೊತೆ ಅತ್ಯುತ್ತಮ ಫೀಲ್ಡಿಂಗ್ನಿಂದ ಕೋಲ್ಕತ್ತಾ ಈ ಪಂದ್ಯವನ್ನು ಗೆದ್ದುಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಜೇಸನ್ ರಾಯ್ 56 ರನ್(29 ಎಸೆತ, 4 ಬೌಂಡರಿ, 5 ಸಿಕ್ಸರ್), ನಾರಾಯಣ ಜಗದೀಶನ್ 27 ರನ್(29 ಎಸೆತ, 4 ಬೌಂಡರಿ) ಹೊಡೆದು ಔಟಾದರು. 2 ಜೀವದಾನ ಪಡೆದ ನಾಯಕ ನಿತೀಶ್ ರಾಣಾ ಸ್ಫೋಟಕ 48 ರನ್(21 ಎಸೆತ, 3 ಬೌಂಡರಿ, 4 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ರಿಂಕು ಸಿಂಗ್ ಔಟಾಗದೇ 18 ರನ್(10 ಎಸೆತ, 2 ಬೌಂಡರಿ, 1 ಸಿಕ್ಸರ್) ಡೇವಿಡ್ ವೈಸ್ ಔಟಾಗದೇ 12 ರನ್(3 ಎಸೆತ, 2 ಸಿಕ್ಸರ್) ಸಿಡಿಸಿದ ಪರಿಣಾಮ ಕೋಲ್ಕತ್ತಾ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.