ಚಿಕ್ಕಮಗಳೂರು: ಕಳೆದ ಐದು ವರ್ಷದ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರ ಆಸ್ತಿ 1.41 ಕೋಟಿ ರೂ. ನಷ್ಟು ಹೆಚ್ಚಳವಾಗಿದೆ. ಇನ್ನು ಒಟ್ಟಾರೆ ಆಸ್ತಿಯಲ್ಲಿ ಅರ್ಧದಷ್ಟು ಸಾಲವನ್ನು ಸಿಟಿ ರವಿ ಹೊಂದಿದ್ದಾರೆ.
ಶಾಸಕ ಸಿ.ಟಿ. ರವಿ ಅವರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ಮತ್ತು ಸ್ವತ್ತುಗಳ ವಿವರವನ್ನು ಘೋಷಿಸಿದ್ದಾರೆ. ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಸಿಟಿ ರವಿ ಸಲ್ಲಿಸಿದ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಮ್ಮ ಸ್ಥಿರ, ಚರ ಆಸ್ತಿ ಹಾಗೂ ಸಾಲದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಸದ್ಯ ಅವರ 6.42 ಕೋಟಿ ಒಡೆಯರಾಗಿದ್ದಾರೆ.
ಸಿಟಿ ರವಿ ಆಸ್ತಿ 1.41 ಕೋಟಿ ಹೆಚ್ಚಳ
ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡೇವಿಟ್ ಪ್ರಕಾರ, 2018ರ ಚುನಾವಣೆ ವೇಳೆ ಸಿ.ಟಿ.ರವಿಯವರದ್ದು 5.01 ಕೋಟಿ ಆಸ್ತಿ ಇತ್ತು. ಅದೀಗ 6.42 ಕೋಟಿಗೆ ಹೆಚ್ಚಳವಾಗಿದೆ. ಜತೆಗೆ, ಕಳೆದ ಚುನಾವಣೆಯಲ್ಲಿ ರವಿ ಅವರ ಹೆಸರಿನಲ್ಲಿ1,11,42,993 ಸಾಲವಿತ್ತು. ಅದು ಈ ಸಲ ಏರಿಕೆಯಾಗಿದೆ. ಈ ಬಾರಿ 1.15 ಕೋಟಿಯಷ್ಟು ಸಾಲ ಹೆಚ್ಚಳವಾಗಿದ್ದು, ಒಟ್ಟಾರೆ ಸಾಲ 2,16,99,595ಕ್ಕೆ ಹೆಚ್ಚಳವಾಗಿದೆ.
ನಗದು, ಚರಾಸ್ತಿ, ಸ್ಥಿರಾಸ್ತಿ ಎಷ್ಟಿದೆ?
ಸಿಟಿ ರವಿ ಅವರ ಬಳಿ 86,431 ರೂ. ನಗದು ಇದ್ದು, ಪತ್ನಿ ಪಲ್ಲವಿ ಅವರ ಬಳಿ 7,89,257 ರೂ. ನಗದು ಇದೆ. ಇನ್ನು ಸಿಟಿ ರವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ 1,61,51,302 ರೂ. ಚರಾಸ್ತಿ ಮೌಲ್ಯ: 2,38,87,384 ರೂ., ಸಿಟಿ ರವಿ ಪತ್ನಿ ಪಲ್ಲವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ 96,27,829 ರೂ. ಹಾಗೂ ಪತ್ನಿ ಪಲ್ಲವಿ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ 84,22,597 ರೂ. ಆಗಿದೆ.
ಸಿಟಿ ರವಿ ಕುಟುಂಬದ ಜಮೀನು ವಿವರಗಳು
ಸಿಟಿ ರವಿ ಹೆಸರಿನಲ್ಲಿ ಅರೆನೂರು ಗ್ರಾಮದಲ್ಲಿ 7 ಎಕರೆ ಜಮೀನು ಇದ್ದು, ಪತ್ನಿ ಪಲ್ಲವಿ ಹೆಸರಿನಲ್ಲಿ ಹುಳಿಯಾರಹಳ್ಳಿಯಲ್ಲಿ 1 ಎಕರೆ 35 ಗುಂಟೆ ಜಮೀನು ಇದೆ. ಒಂದು ಸ್ಕಾರ್ಪಿಯೋ ಕಾರು, 65 ಸಾವಿರ ಬೆಲೆ ಬಾಳುವ ಪಿಸ್ತೂಲ್ ಕೂಡಾ ಇವರ ಬಳಿ ಇದೆ.
ಸಾಲ ಎಷ್ಟಿದೆ ?
ಸಿ.ಟಿ. ರವಿ ಅವರು ಪತ್ನಿ, ತಾಯಿ ಮತ್ತು ತಂದೆಯ ಬಳಿ ಸಹ ಸಾಲ ಮಾಡಿದ್ದಾರೆ. ಜತಗೆ ಸಿ.ಟಿ.ರವಿ ಅವರ ಪತ್ನಿ ಹೆಸರಿನಲ್ಲಿ2,16,99,595 ಸಾಲವಿದ್ದು, ಸಿ.ಟಿ.ರವಿ ಹೆಸರಿನಲ್ಲಿ 94,57,504 ರೂ. ಸಾಲವಿದೆ. ಆಸ್ತಿಯ ಅರ್ಧದಷ್ಟು ಸಾಲವನ್ನು ಶಾಸಕ ಸಿ.ಟಿ.ರವಿ ಹೊಂದಿದ್ದಾರೆ. ಅವರು ಒಟ್ಟು 6.42 ಕೋಟಿ ರೂ. ಆಸ್ತಿ ಹೊಂದಿದ್ದು, ಅದರಲ್ಲಿ3.32 ಕೋಟಿ ರೂ.ನಷ್ಟು ಸಾಲವಿದೆ.