ನಾಗ್ಪುರ: ಸಮಾಜದಲ್ಲಿ ಜಾತಿ- ವರ್ಗಗಳ ಮಧ್ಯೆ ತಾರತಮ್ಯ ಇರುವವರೆಗೂ ಮೀಸಲು ನೀತಿ ಮುಂದುವರಿಯಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅಲ್ಲದೇ ಆರೆಸ್ಸೆಸ್ ಮೊದಲಿನಿಂದಲೂ ಸಂವಿಧಾನದಲ್ಲಿ ಒದಗಿಸಲಾಗಿರುವ ಮೀಸಲು ವಿಚಾರವನ್ನು ಸಂಪೂರ್ಣವಾಗಿ ಬೆಂಬಲಿಸಿಕೊಂಡು ಬಂದಿದೆ ಎಂದಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ”ನಾವು ನಮ್ಮದೇ ಸಮಾಜದ ಕೆಲ ವರ್ಗಗಳ ಏಳಿಗೆ ಬಗ್ಗೆ ಕಾಳಜಿ ವಹಿಸಲಿಲ್ಲ. ಅವರನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆಯೇ ಇರಿಸಿದ್ದೆವು.
ಸುಮಾರು 2000 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಶೋಷಿತರ ಏಳಿಗೆಗೆ ಸಮಾನತೆಯ ಧ್ವನಿ ಎತ್ತುವುದು, ಕೆಲವು ವಿಶೇಷ ಪರಿಹಾರಗಳ ಅಗತ್ಯವಿದೆ. ಅದರಲ್ಲಿ ಸಂವಿಧಾನದತ್ತ ಮೀಸಲು ನೀತಿಯೂ ಒಂದಾಗಿದೆ. ಹೀಗಾಗಿ ಸಮಾಜದಲ್ಲಿ ಜಾತಿ- ವರ್ಗಗಳ ತಾರತಮ್ಯ ಇರುವವರೆಗೂ, ಅವರಿಗೆ ನಾವು ಸಮಾನತೆ ಒದಗಿಸುವವರೆಗೂ ಮೀಸಲು ನೀತಿ ಇರಬೇಕು. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಗಳಿಗೆ ಆರೆಸ್ಸೆಸ್ ಸಂಪೂರ್ಣ ಬೆಂಬಲ ನೀಡುತ್ತದೆ,” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ನೀಡಬೇಕೆಂದು ಮರಾಠ ಸಮುದಾಯ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲಿ ಭಾಗವತ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಅಲ್ಲದೇ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದಲ್ಲಿ ತಾರತಮ್ಯವಿದೆ ಎಂದು ಹೇಳಿದ್ದೂ ಸಹ ಇಲ್ಲಿ ಮುಖ್ಯವಾಗಿದೆ. 1947ರಲ್ಲಿ ಭಾರತದಿಂದ ಬೇರ್ಪಟ್ಟವರು (ಪಾಕಿಸ್ತಾನಿಯರು) ತಾವು ತಪ್ಪು ಮಾಡಿದ್ದೇವೆ ಎಂದು ಇಂದು ಪರಿತಪಿಸುತ್ತಿದ್ದಾರೆ. ಹೀಗಾಗಿ ಇಂದಿನ ಯುವಜನರು ವೃದ್ಧರಾಗುವ ಮುನ್ನವೇ ‘ಅಖಂಡ ಭಾರತ’ ಅಥವಾ ಅವಿಭಜಿತ ಭಾರತದ ಉದ್ದೇಶ ವಾಸ್ತವವಾಗಿ ಈಡೇರುತ್ತದೆ ಎಂದು ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.