ನವದೆಹಲಿ : ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿದ್ದಾರೆ ಎಂಬ ವದಂತಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಟಿಎಂಸಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ವಿಚಾರಕ್ಕೆ ಅಮಿತ್ ಶಾಗೆ ಕರೆ ಮಾಡಿದ್ದು ಸಾಬೀತಾದ್ರೆ ರಾಜೀನಾಮೆ ನೀಡುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿಯ ರಾಷ್ಟ್ರೀಯ ಪಕ್ಷದ ಸ್ಥಾನಮಾನದ ಬಗ್ಗೆ ನಾನು ಅಮಿತ್ ಶಾ ಅವರನ್ನು ಕರೆ ಮಾಡಿದ್ದು, ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ. ನಾನು ಅಮಿತ್ ಶಾಗೆ ನಾಲ್ಕು ಬಾರಿ ಕರೆ ಮಾಡಿದ್ದೇನೆ ಎಂಬ ವದಂತಿ ಸಂಪೂರ್ಣವಾಗಿ ಸುಳ್ಳು, ಟಿಎಂಸಿ ರಾಷ್ಟ್ರೀಯ ಪಕ್ಷವಾಗಿತ್ತು. ಅದು ಉಳಿಯುತ್ತದೆ. ನನ್ನ ಪಕ್ಷದ ಹೆಸರು ಉಳಿಯುತ್ತದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ಏ. 10 ರಂದು ತೃಣಮೂಲ ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP), ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಗಳ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ರದ್ದುಗೊಳಿಸಿತು. ಇಸಿಯ ನಿರ್ಧಾರವನ್ನು ಪ್ರಶ್ನಿಸಲು ಕಾನೂನು ಆಯ್ಕೆಗಳನ್ನು ಪರಿಗಣಿಸುವುದಾಗಿ ಟಿಎಂಸಿ ಹೇಳಿದೆ. ಇಂತಹ ವದಂತಿಗಳನ್ನು ಹರಡುತ್ತಿರುವವರು ಕ್ಷಮೆಯಾಚಿಸಬೇಕು. ನಾನು ರಾಜಕೀಯವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ನಮ್ಮ ನಾಲ್ವರು ಶಾಸಕರನ್ನು ಕೇಂದ್ರ ಸಂಸ್ಥೆಗಳು ನನ್ನ ವಿರುದ್ಧದ ಪಿತೂರಿಯ ಭಾಗವಾಗಿ ಬಂಧಿಸಿವೆ ಎಂದು ಆರೋಪಿಸಿದ್ದಾರೆ.