ಮಾಧ್ಯಮ ಕ್ಷೇತ್ರದ ದಿಗ್ಗಜ ರೂಪರ್ಟ್ ಮರ್ಡೋಕ್ ಅವರು ಶನಿವಾರ ತಮ್ಮ 93ನೇ ವಯಸ್ಸಿನಲ್ಲಿ ತಮಗಿಂತ 25 ವರ್ಷ ಕಿರಿಯರಾದ ನಿವೃತ್ತ ಕಣ ಜೀವಶಾಸ್ತ್ರಜ್ಞೆ 67 ವರ್ಷ ವಯಸ್ಸಿನ ಎಲೆನಾ ಝುಕೋವಾ ಅವರನ್ನು ವಿವಾಹವಾದರು. ಇದು ಮರ್ಡೋಕ್ ಅವರ ಐದನೇ ವಿವಾಹ. ಮೊರಗಾ ಎಂಬ ಕ್ಯಾಲಿಫೋರ್ನಿಯಾ ವೈನ್ ಯಾರ್ಡ್ ಎಸ್ಟೇಟ್ ನಲ್ಲಿ ವಿವಾಹ ನಡೆಯಿತು.
ವಿವಾಹದ ಚಿತ್ರಗಳನ್ನು ಮರ್ಡೋಕ್ ಮಾಲೀಕತ್ವದ ಬ್ರಿಟನ್ ಪತ್ರಿಕೆ ‘ದ ಸನ್’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ನವಜೋಡಿ ಫೋಟೊಗೆ ಫೋಸ್ ನೀಡುತ್ತಾ ನಗುತ್ತಿರುವ ಚಿತ್ರಗಳು ಪ್ರಕಟವಾಗಿವೆ.
ಈ ವಿವಾಹ ಸಂಭ್ರಮದಲ್ಲಿ ನ್ಯೂ ಇಂಗ್ಲೆಂಡ್ ಪೇಟ್ರಿಯಾಟ್ಸ್ ಯುಎಸ್ ಫುಟ್ಬಾಲ್ ತಂಡದ ಮಾಲೀಕ ರಾಬರ್ಟ್ ಕ್ರಾಫ್ಟ್ (82) ಮತ್ತು ಅವರ 50 ವರ್ಷ ವಯಸ್ಸಿನ ಪತ್ನಿ ದಾನಾ ಬ್ಲೂಂಬರ್ಗ್ ಪಾಲ್ಗೊಂಡಿದ್ದರು ಎಂದು ವರದಿ ವಿವರಿಸಿದೆ. ಇದಕ್ಕೂ ಮುನ್ನ ಮರ್ಡೋಕ್ ನಾಲ್ಕು ಬಾರಿ ವಿವಾಹವಾಗಿದ್ದು, ಇತ್ತೀಚೆಗೆ ರೋಲಿಂಗ್ ಸ್ಟೋನ್ ಮುಖ್ಯಸ್ಥ ಮೈಕ್ ಜಾಗರ್ ಅವರ ಸುಧೀರ್ಘ ಕಾಲದ ಗೆಳತಿ ಜೆರ್ರಿ ಹಾಲ್ ಅವರನ್ನು ವಿವಾಹವಾಗಿದ್ದರು.
ಕಳೆದ ವರ್ಷ ದಂತ ನೈರ್ಮಲ್ಯ ತಜ್ಞೆ, ಕನ್ಸರ್ವೇಟಿವ್ ರೇಡಿಯೊ ನಿರೂಪಕಿ ಆ್ಯನ್ ಲೆಸ್ಲಿ ಸ್ಮಿತ್ ಅವರ ಜತೆ ನಿಶ್ಚಿತಾರ್ಥವನ್ನು ಮರ್ಡೋಕ್ ಘೋಷಿಸಿದ್ದರು. ಆದರೆ ಒಂದು ತಿಂಗಳ ಒಳಗಾಗಿ ಉದ್ದೇಶಿತ ವಿವಾಹವನ್ನು ರದ್ದುಪಡಿಸಿರುವುದಾಗಿ ಹೇಳಿಕೆ ನೀಡಿದ್ದರು. ಝುಕೋವಾ ರಷ್ಯಾದಿಂದ ಅಮೆರಿಕಕ್ಕೆ ಆಗಮಿಸಿದ್ದು, ಕಣ ಜೀವಶಾಸ್ತ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪುತ್ರಿ ದಾಶಾ ಝುಕೋವಾ ಉದ್ಯಮಿ.
ಮರ್ಡೋಕ್ ಅವರಿಗೆ ಆರು ಮಂದಿ ಮಕ್ಕಳಿದ್ದು, ಆಸ್ಟ್ರೇಲಿಯಾದ ಗಗನಸಖಿ ಪ್ಯಾಟ್ರಿಕಾ ಬೂಕರ್ ಅವರನ್ನು ಮೊದಲು ವಿವಾಹವಾಗಿದ್ದರು. 1960ರ ದಶಕದಲ್ಲಿ ಇವರಿಗೆ ವಿಚ್ಛೇದನ ನೀಡಿದ್ದರು.