ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್ ಇದೀಗ 11 ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಇದೇ ಅವರ ಕೊನೆಯ ಬಿಗ್ ಬಾಸ್ ನಿರೂಪಣೆ ಎಂದು ಸುದೀಪ್ ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಇದು ಸುದೀಪ್ ಹಾಗೂ ಬಿಗ್ ಬಾಸ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ. ಅಲ್ಲದೆ ಸುದೀಪ್ ಅವರ ಈ ಏಕಾಏಕಿ ನಿರ್ಧಾರಕ್ಕೆ ಕಾರಣವೇನು ಎಂಬ ಕುತೂಹಲ ಮನೆ ಮಾಡಿದೆ. ಈ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ
ರೂಪೇಶ್ ರಾಜಣ್ಣ ‘ಬಿಗ್ ಬಾಸ್’ ಆಯೋಜಕರ ವಿರುದ್ಧ ಹರಿಹಾಯ್ದಿದ್ದರು. ಸುದೀಪ್ ಅವರಿಗೆ ಅವಮಾನ ಆಗಿದೆ ಎಂದು ಒಂದು ದಿನದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ, ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಈ ವಿಚಾರವನ್ನು ರೂಪೇಶ್ ರಾಜಣ್ಣ ಅವರು ವಿವರಿಸಿದ್ದಾರೆ. ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ‘ಬಿಗ್ ಬಾಸ್’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.
ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು.
‘ಎ23 ರಮ್ಮಿ’ ಆ್ಯಪ್ ಕೂಡ ‘ಬಿಗ್ ಬಾಸ್’ನ ಸ್ಪಾನ್ಸರ್ಗಳಲ್ಲಿ ಒಂದಾಗಿದೆ. ಈ ಹೆಸರನ್ನು ತೆಗೆದುಕೊಳ್ಳೋಕೆ ಇರಿಸುಮುರುಸಾಗುತ್ತಿದೆ ಎಂದು ಸುದೀಪ್ ಹೇಳಿದ್ದರು. ಇದನ್ನು ಸ್ವಲ್ಪ ಅವಾಯ್ಡ್ ಮಾಡಿ ಎಂದು ಸುದೀಪ್ ಕೋರಿದ್ದರು. ಆದರೆ, ಆಯೋಜಕರು ಒಪ್ಪಿಲ್ಲ. ಇದೆಲ್ಲಾ ಕಾರಣದಿಂದ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ. ಆದರೆ ಯಾವಾಗ ಸುದೀಪ್ ಬಿಗ್ ಬಾಸ್ ತೊರೆಯಲು ನಿರ್ಧರಿಸಿದರೋ ಆಗ ಆಯೋಜಕರು ಬದಲಾವಣೆಗಳನ್ನು ಮಾಡಲು ಒಪ್ಪಿದ್ದಾರೆ ಎನ್ನಲಾಗಿದೆ.