ರಶ್ಯಾದ ರಾಜಧಾನಿ ಮಾಸ್ಕೋದ ಆಗ್ನೇಯಕ್ಕೆ 860 ಕಿ.ಮೀ ದೂರದಲ್ಲಿರುವ ವೊಲ್ಗೊಗ್ರಾಡ್ ಪ್ರಾಂತದ ಸುರೊವ್ಕಿನೊ ಜೈಲಿನಲ್ಲಿ 4 ಕೈದಿಗಳ ಗುಂಪೊಂದು ಜೈಲಿನ 4 ಕಾವಲುಗಾರರನ್ನು ಇರಿದು ಹತ್ಯೆಗೈದ ಬಳಿಕ 8 ಕಾವಲುಗಾರರನ್ನು ಹಾಗೂ 4 ಸಹಕೈದಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಳಿಕ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆ ನಾಲ್ವರು ಆರೋಪಿಗಳನ್ನೂ ಗುಂಡಿಕ್ಕಿ ಹತ್ಯೆ ಮಾಡಿದೆ. ಆರೋಪಿಗಳು ಐಸಿಸ್ ಜೊತೆ ಸಂಪರ್ಕ ಹೊಂದಿದ್ದರು ಎಂದು ಫೆಡರಲ್ ಬಂದೀಖಾನೆ ಸೇವೆಯ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಖೈದಿಗಳಿಂದ ಹಲ್ಲೆಗೊಳಗಾದ 4 ಕಾವಲುಗಾರರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡ ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತರ ಮೂವರು ಕಾವಲುಗಾರರೂ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಲಿನಲ್ಲಿ ನಡೆಯುತ್ತಿದ್ದ ದೈನಂದಿನ ಶಿಸ್ತು ಸಮಿತಿ ಸಭೆಯ ಸಂದರ್ಭ ಕೈದಿಗಳ ತಂಡವೊಂದು ಏಕಾಏಕಿ ಅಧಿಕಾರಿಗಳ ಮೇಲೆ ಚೂರಿಯಿಂದ ದಾಳಿ ನಡೆಸಿದ್ದು ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು ಎನ್ನಲಾಗಿದೆ.