ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ನಡೆಯುವ ಉಕ್ರೇನ್ ಶೃಂಗಸಭೆಯ ಎರಡನೇ ಸುತ್ತಿನ ಮಾತುಕತೆಯಲ್ಲಿ ರಶ್ಯವೂ ಪಾಲ್ಗೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಜೂನ್ 15ರಂದು ಸ್ವಿಝರ್ಲ್ಯಾಂಡ್ನಲ್ಲಿ ನಡೆದಿದ್ದ ಉಕ್ರೇನ್ ಶೃಂಗಸಭೆಯ ಪ್ರಥಮ ಹಂತದ ಸಭೆಗೆ ರಶ್ಯವನ್ನು ಆಹ್ವಾನಿಸಿರಲಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ 90ಕ್ಕೂ ಅಧಿಕ ರಾಷ್ಟ್ರಗಳ ಪ್ರತಿನಿಧಿಗಳು ಉಕ್ರೇನ್ನಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದರು. ಆದರೆ ರಶ್ಯವನ್ನು ಒಳಗೊಂಡಿರದ, ಸಂಘರ್ಷವನ್ನು ಕೊನೆಗೊಳಿಸುವ ಯಾವುದೇ ಚರ್ಚೆಗಳು `ಅಸಂಬದ್ಧ’ ಎಂದು ರಶ್ಯ ಟೀಕಿಸಿತ್ತು.
`ಎರಡನೇ ಶೃಂಗಸಭೆಯಲ್ಲಿ ರಶ್ಯದ ಪ್ರತಿನಿಧಿಗಳು ಪಾಲ್ಗೊಳ್ಳಬೇಕು ಎಂದು ಬಯಸುವುದಾಗಿ ಕೀವ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ. ಶೃಂಗಸಭೆಗೂ ಮುನ್ನ ಇಂಧನ ಭದ್ರತೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಪ್ರತ್ಯೇಕ ಸಭೆ ಖತರ್ನಲ್ಲಿ ಮತ್ತು ಆಹಾರ ಭದ್ರತೆ ಕುರಿತ ಸಭೆ ಈಜಿಪ್ಟ್ನಲ್ಲಿ ನಡೆಯಲಿದೆ ಎಂದು ಝಲೆನ್ ಸ್ಕಿ ಮಾಹಿತಿ ನೀಡಿದ್ದಾರೆ.