ಮಾಸ್ಕೋ: ರಷ್ಯಾ ಉಕ್ರೇನ್ ಯುದ್ಧ (Russia-Ukraine War) ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮಾಸ್ಕೋ (Moscow) ಮೇಲೆ ಡ್ರೋನ್ ದಾಳಿ (Drone Attacks) ನಡೆದಿದ್ದು, ಈ ದಾಳಿಯನ್ನು ಉಕ್ರೇನ್ ನಡೆಸಿದೆ ಎಂದು ರಷ್ಯಾ ಆರೋಪ ಮಾಡಿದೆ. ಪಶ್ಚಿಮದಲ್ಲಿರುವ ಓಡಿಂಟ್ಸೊವೊ ಜಿಲ್ಲೆಯಲ್ಲಿ ಒಂದು ಡ್ರೋನ್ ಹೊಡೆದು ಉರುಳಿಸಲಾಗಿದೆ. ಇನ್ನು ಎರಡು ಡ್ರೋನ್ ಮೇಲೆ ದಾಳಿ ಮಾಡಿ ತಟಸ್ಥಗೊಳಿಸಿದ್ದರೂ ಅವು ಕಟ್ಟಡದ ಮೇಲೆ ಅಪ್ಪಳಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.
ಈ ದಾಳಿಯಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಎರಡು ಕಟ್ಟಡಗಳ ಮುಂಭಾಗಗಳು ಸ್ವಲ್ಪ ಹಾನಿಗೊಳಗಾಗಿವೆ ಎಂದು ನಗರದ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ. ಉಕ್ರೇನ್ ಅಧಿಕಾರಿಗಳು ಘಟನೆಯನ್ನು ಒಪ್ಪಿಕೊಂಡಿಲ್ಲ. ನಗರ ಕೇಂದ್ರದ ನೈಋತ್ಯದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಈ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳ ಕಡೆಗೆ ತಿರುಗಿಸಲಾಗಿದೆ.