ವಾಷಿಂಗ್ಟನ್/ ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಅಮೆರಿಕ ಮತ್ತು ರಷ್ಯಾ ಮುಖಾಮುಖಿಯಾಗಿದೆ. ರಷ್ಯಾದ Su-27 ಜೆಟ್ ಫೈಟರ್ ಕಪ್ಪು ಸಮುದ್ರದ ಮೇಲೆ ಅಮೆರಿಕದ MQ-9 ರೀಪರ್ ಡ್ರೋನ್ಗೆ ಡಿಕ್ಕಿ ಹೊಡೆದಿದೆ ಎಂದು ಯುಎಸ್ ಮಿಲಿಟರಿಯ ಯುರೋಪಿಯನ್ ಕಮಾಂಡ್ ತಿಳಿಸಿದೆ.
ನಮ್ಮ MQ-9 ಡ್ರೋನ್ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿತ್ತು. ಅದನ್ನು ರಷ್ಯಾದ ಜೆಟ್ ತಡೆಹಿಡಿದು ಹೊಡೆದುರುಳಿಸಿದೆ. ಇದರ ಪರಿಣಾಮವಾಗಿ ಡ್ರೋನ್ ಪತನಗೊಂಡಿದೆ ಎಂದು ಅಮೆರಿಕ ಹೇಳಿದೆ.
ಬ್ರಸೆಲ್ಸ್ನಲ್ಲಿರುವ ನ್ಯಾಟೋ ರಾಜತಾಂತ್ರಿಕರು ಘಟನೆಯನ್ನು ದೃಢಪಡಿಸಿದ್ದು, ಕಣ್ಗಾವಲು ಮಾಡಲು ಅಮೆರಿಕ MQ-9 ಬಳಸುತ್ತಿದೆ. ರಷ್ಯಾದ ನೌಕಾ ಪಡೆಗಳ ಮೇಲೆ ಕಣ್ಣಿಟ್ಟು ಕಪ್ಪು ಸಮುದ್ರದ ಮೇಲೆ ದೀರ್ಘಕಾಲ ಕಾರ್ಯನಿರ್ವಹಿಸುತ್ತಿತ್ತು.
ಅಮೆರಿಕದ ಆರೋಪವನ್ನು ರಷ್ಯಾ ತಿರಸ್ಕರಿಸಿದೆ. MQ-9 ಡ್ರೋನ್ ರಷ್ಯಾದ ಗಡಿಯ ಬಳಿ ಹಾರಾಟ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆ ನೀಡಿದೆವು. ಈ ವೇಳೆ ಡ್ರೋನ್ ಎತ್ತರದಲ್ಲಿ ಸಂಚರಿಸುತ್ತಿದ್ದ ಕಾರಣ ನಿಯಂತ್ರಣ ಮಾಡಲು ಸಾಧ್ಯವಾಗದೇ ಪತನಗೊಂಡು ನೀರಿನ ಮೇಲೆ ಬಿದ್ದಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.