ಮಾಸ್ಕೋ: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸಲು ಸಹಕರಿಸಿದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರನ್ನ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಮಾಸ್ಕೋದ ಅಪಾರ್ಟ್ಮೆಂಟ್ನಲ್ಲಿ ಆಂಡ್ರೆ ಅವರನ್ನು ಬೆಲ್ಟ್ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.
ಬೊಟಿಕೋವ್ ಗಮಾಲೆಯಾ ರಾಷ್ಟ್ರೀಯ ಪರಿಸರ ವಿಜ್ಞಾನ ಮತ್ತು ಗಣಿತ ಸಂಶೋಧನಾ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ತಿಳಿಸಿದೆ.
ಕೌಟುಂಬಿಕ ಸಂಘರ್ಷದ ಕಾರಣಗಳಿಂದ ಕೊಲೆ ನಡೆದಿದೆ ಎನ್ನಲಾಗಿದ್ದು, 29 ವರ್ಷದ ವ್ಯಕ್ತಿಯು ಬೊಟಿಕೋವ್ ಕತ್ತಿಗೆ ಬೆಲ್ಟ್ನಿಂದ ಬಿಗಿದು ಹತ್ಯೆ ಮಾಡಿದ್ದಾನೆ. ವಿಚಾರಣೆ ವೇಳೆ ಆರೋಪಿಯೇ ಸ್ವತಃ ಇದನ್ನ ಒಪ್ಪಿಕೊಂಡಿದ್ದು, ಕೊಲೆ ಮಾಡಿರುವ ಆರೋಪಿ ಈ ಹಿಂದೆಯೂ ಹಲವು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
2020 ರಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್ ಒಬ್ಬರು. 2021 ರಲ್ಲಿ ಕೋವಿಡ್ ಲಸಿಕೆಯಲ್ಲಿ ಮಾಡಿದ ಕೆಲಸಕ್ಕಾಗಿ ಅವರಿಗೆ ಆರ್ಡರ್ ಆಫ್ ಮೆರಿಟ್ ಫಾರ್ ಫಾದರ್ಲ್ಯಾಂಡ್ ಪ್ರಶಸ್ತಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀಡಿ ಗೌರವಿಸಿದ್ದರು.