ಬೆಂಗಳೂರು: ಬೆಂಗಳೂರಿನಲ್ಲಿ ಡೆಂಗ್ಯೂ ರೋಗ ಹಾವಳಿ ಮಿತಿ ಮೀರಿ ಹೆಚ್ಚಾಗುತ್ತಿದ್ದು ಬಿಬಿಎಂಪಿ ರೋಗವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ, ತನ್ನ ಕೆಲಸ ಮಾಡಲು ಕೈಲಾಗದೆ ಜನರೆಲ್ಲಾ ಸೇರಿ ರೋಗ ಕಡಿಮೆ ಮಾಡಬೇಕು ಎಂದು ಕಾರಣ ಕೊಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ದಾಸರಿ, ಬೆಂಗಳೂರಿನಲ್ಲಿ 2-3 ಸಾವಿರ ಡೆಂಗ್ಯೂ ಕೇಸ್ಗಳಿವೆ ಎಂದು ಬಿಬಿಎಂಪಿ ಹೇಳುತ್ತಿದೆ, ಆದರೆ ನಮಗಿರುವ ಮಾಹಿತಿ ಪ್ರಕಾರ 40,000 ರಿಂದ 50,000 ಪ್ರಕರಣಗಳಿವೆ ಎಂದರು.
ಆಸ್ಪತ್ರೆಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ, ಡೆಂಗ್ಯೂ ನಿಯಂತ್ರಣಕ್ಕೆ ಜನ ನಮ್ಮ ಜೊತೆ ಕೈ ಜೋಡಿಸಬೇಕು ಎಂದು ಬಿಬಿಎಂಪಿ ಮನವಿ ಮಾಡುತ್ತಿದೆ, ಜನ ಮನೆಯಲ್ಲಿ ನಿಯಂತ್ರಣ ಮಾಡಬಹುದು ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾರು ನಿಯಂತ್ರಿಸಬೇಕು, ಬಿಬಿಎಂಪಿ ತನ್ನ ಕೆಲಸ ಸರಿಯಾಗಿ ಮಾಡದೆ, ಜನರ ಮೇಲೆ ಹೇಳುತ್ತಿದೆ. ಬಿಬಿಎಂಪಿ ಮೊದಲು ತನ್ನ ಕೆಲಸ ಮಾಡಲಿ, ಜನ ಸಹಕಾರ ಕೊಡುತ್ತಾರೆ ಎಂದರು.
25 ವರ್ಷದ ಯುವಕ ಡೆಂಗ್ಯೂಗೆ ಬಲಿಯಾಗಿದ್ದಾನೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಹಣ ವಸೂಲಿ ಮಾಡಲಾಗುತ್ತಿದೆ. ಕೊವಿಡ್ ಸಂದರ್ಭದಲ್ಲಿ ಮಾಡಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಡೆಂಗ್ಯೂ ರೋಗಿಗಳಿಗೆ ಉಚಿತ ಕೊಡಿಸಲು ಸರ್ಕಾರ ಮುಂದಾಗಬೇಕು, ಡೆಂಗ್ಯೂ ಕಾಯಿಲೆಯಿಂದ ಯಾರೂ ಸಾಯಬಾರದು ಎಂದರು. ಬಿಬಿಎಂಪಿ ವೈಫಲ್ಯದಿಂದ ಇಂದು ಡೆಂಗ್ಯೂ ಬಂದು ಜನ ಸಾಯುತ್ತಿದ್ದಾರೆ. ಸಾವನ್ನಪ್ಪಿದ ರೋಗಿಯ ಕುಟುಂಬಕ್ಕೆ ಸರ್ಕಾರ ಅವರಿಗೆ 20-25 ಲಕ್ಷ ಪರಿಹಾರ ಕೊಡಬೇಕು, ಆಗ ಮಾತ್ರ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಜವಾಬ್ದಾರಿ ಬರುತ್ತದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿ, ನಗರದಲ್ಲಿ ಡೆಂಗ್ಯೂ ಪ್ರಕರಣ ಮಿತಿ ಮೀರಿ ಹೆಚ್ಚಾಗಿದ್ದು, ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ನೀಡುವಂತೆ ಮಾಡಬೇಕು. ಇದು ಗಂಭೀರ ಕಾಯಿಲೆಯಾಗಿದ್ದು, ಜನ ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ಶಶಿ ಕುಮಾರ್ ಆರಾಧ್ಯ, ಶಿವಾನಂದ್ ರೆಡ್ಡಿ, ಅನಿಲ್, ಖಾಲಿದ್, ಪುಟ್ಟಣ್ಣ ಗೌಡ, ಪ್ರಸನ್ನ ಸೇರಿದಂತೆ ಇತರ ನಾಯಕರು ಹಾಜರಿದ್ದರು.