ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರನ್ನು ಶ್ಲಾಘಿಸಿದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ಯಾಟ್ ಕಮಿನ್ಸ್ ಅವರ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಭಾನುವಾರ ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ತಾನು ಅಂದುಕೊಂಡಿದ್ದ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗದೆ ಭಾರತಕ್ಕೆ ಕೇವಲ 200 ರನ್ಗಳ ಗುರಿಯನ್ನು ನೀಡಿತ್ತು.
ಆರಂಭದಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸಿದ ಅತ್ಯುತ್ತಮ ಆರಂಭ ಪಡೆದಿದ್ದ ಆಸ್ಟ್ರೇಲಿಯಾ ನಂತರ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಅವರನ್ನು ನಿಯಂತ್ರಿಸುವಲ್ಲಿ ವಿಫಲವಾಗಿತ್ತು. ಕೊಹ್ಲಿ ಹಾಗೂ ರಾಹುಲ್ ಅರ್ಧಶತಕಗಳ ಬಲದಿಂದ ಭಾರತ 6 ವಿಕೆಟ್ಗಳ ಗೆಲುವು ಪಡೆಯಿತು. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
“ಟಾಸ್ ಗೆದ್ದು ಬ್ಯಾಟಿಂಗ್ ಅಯ್ಕೆ ಮಾಡಕೊಂಡ ಆಸ್ಟ್ರೇಲಿಯಾ ತಂಡದ ನಿರ್ಧಾರದ ಬಗ್ಗೆ ನನಗೆ ಅಚ್ಚರಿಯಾಯಿತು. ಭಾರತ ತಂಡದ ಬೌಲರ್ಗಳಿಂದ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಕಾರಣ ಆಸ್ಟ್ರೇಲಿಯಾ 199 ರನ್ಗಳಿಗೆ ಆಲ್ಔಟ್ ಆಯಿತು. ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದರು. ಆದರೆ, ಅವರಿಗೆ ಎಡಗೈ ಸ್ಪಿನ್ನರ್ ಅಲಭ್ಯತೆ ಕಾಡುತ್ತಿತ್ತು,” ಎಂದು ಸಚಿನ್ ತೆಂಡೂಲ್ಕರ್ ಪಂದ್ಯದ ಬಳಿಕ ಟ್ವೀಟ್ ಮಾಡಿದ್ದಾರೆ.